ನ್ಯೂಸ್

ಕಳಂಕಿತರ ನೇಮಕ ಬೇಡ: ತನಿಖಾ ಸಂಸ್ಥೆಗಳಿಗೆ ನಿಯುಕ್ತಿ, ಸರ್ವೀಸ್ ರೆಕಾರ್ಡ್ ಪರಿಗಣಿಸಲು ಸೂಚನೆ..

Webdesk - Ravikanth

ಬೆಂಗಳೂರು: ಭ್ರಷ್ಟಾಚಾರ ನಿಮೂಲನೆಗಾಗಿ ರಚಿಸಲಾಗಿರುವ ಭ್ರಷ್ಟಾಚಾರ ನಿಗ್ರಹ ದಳದಂತಹ (ಎಸಿಬಿ) ಸಂಸ್ಥೆಗಳಿಗೆ ಕಳಂಕಿತ ಅಧಿಕಾರಿಗಳನ್ನು ನೇಮಕ ಮಾಡಬಾರದು. ಅಧಿಕಾರಿಗಳನ್ನು ನೇಮಿಸುವಾಗ ಅವರ ಸೇವಾ ದಾಖಲೆ (ಸರ್ವೀಸ್ ರೆಕಾರ್ಡ್) ಹಾಗೂ ಸಮಗ್ರತೆ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಉಪ ತಹಸೀಲ್ದಾರ್ ಪಿ.ಎಸ್. ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕಾರ್ಯದರ್ಶಿಗೆ ಈ ನಿರ್ದೇಶನ ನೀಡಿತು.

ಎಸಿಬಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಳ್ಳಬೇಕು. ಭ್ರಷ್ಟಾಚಾರ ತಡೆಯಲೆಂದೇ ರಚಿಸಲಾಗಿರುವ ಎಸಿಬಿಗೆ ಅಧಿಕಾರಿಯಾಗುವವರಿಗೆ ವಿಶ್ವಾಸಾರ್ಹತೆ ಇರಬೇಕು. ಸಂಸ್ಥೆಯ ಘನತೆಯನ್ನು ಉನ್ನತ ಹಂತಕ್ಕೆ ಒಯ್ಯುವ ಕ್ಷಮತೆ ಇರಬೇಕು. ಅಧಿಕಾರಿಗಳನ್ನು ನೇಮಕ ಮಾಡುವಾಗ ಅವರ ಸರ್ವೀಸ್ ರೆಕಾರ್ಡ್ ಹಾಗೂ ಸಮಗ್ರತೆ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು.

ಅಧಿಕಾರಿಗಳ ನೇಮಕಾತಿ ಯಾವುದೇ ಒತ್ತಡಗಳಿಗೆ ಒಳಗಾಗದೆ ನಡೆಸಬೇಕು. ನೇಮಕದ ಹಿಂದೆ ಆಂತರಿಕ ಅಥವಾ ಬಾಹ್ಯ ಪ್ರಭಾವ ಇರಬಾರದು. ನೇಮಕ ಮಾಡಲಾಗುವ ಅಧಿಕಾರಿ, ಅವರ ಕುಟುಂಬ ಸದಸ್ಯರ ವಿರುದ್ಧ ಎಸಿಬಿ ಅಥವಾ ಲೋಕಾಯುಕ್ತ ತನಿಖೆ ನಡೆಯುತ್ತಿರಬಾರದು. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದ ನ್ಯಾಯಪೀಠ, ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಒದಗಿಸಬೇಕು ಎಂದು ಡಿಪಿಎಆರ್ ಕಾರ್ಯದರ್ಶಿಗೆ ನಿರ್ದೇಶಿಸಿತು.

ಸುಪ್ರೀಂಗೆ ಮೇಲ್ಮನವಿ: ಇದಕ್ಕೂ ಮುನ್ನ ಎಸಿಬಿ ಪರ ವಕೀಲರು ವಾದ ಮಂಡಿಸಿ, ಎಸಿಬಿ ಮತ್ತದರ ಎಡಿಜಿಪಿ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿ ಜು.7ರಂದು ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ವಿಶೇಷ ಮೇಲ್ಮನವಿ (ಎಸ್​ಎಲ್​ಪಿ) ಸಲ್ಲಿಸಲಾಗಿದೆ. ಅಲ್ಲಿ ಮಂಗಳವಾರ (ಜು.12) ಅರ್ಜಿ ವಿಚಾರಣೆಗೆ ನಿಗದಿಯಾಗಿದೆ. ಆದ್ದರಿಂದ, ಈ ಪ್ರಕರಣದ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು. ಅದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಜು.13ಕ್ಕೆ ಮುಂದೂಡಿದರಾದರೂ, ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದು ಅಂಶಗಳನ್ನು ಆದೇಶದಲ್ಲಿ ದಾಖಲು ಮಾಡುವುದಾಗಿ ಹೇಳಿದರು.

ವಾದ ಮಂಡಿಸುವ ಹಕ್ಕಿಲ್ಲ: ನ್ಯಾಯಮೂರ್ತಿಗಳು ಆದೇಶ ಬರೆಸಲು ಮುಂದಾದಾಗ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ನೀವು ಎಡಿಜಿಪಿ ವಿರುದ್ಧ ಕೆಲವೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ. ಅವರು ಹುದ್ದೆಯಲ್ಲೇ ಇರಬಾರದು ಎಂಬಂತೆ ಹೇಳಿದ್ದೀರಿ. ಹೈಕೋರ್ಟ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂದೇಶ್, ಹೈಕೋರ್ಟ್​ಗೆ ಅರ್ಜಿ ಸಲ್ಲಿಸದೆಯೇ ಈ ಪ್ರಕರಣದಲ್ಲಿ ವಾದ ಮಂಡಿಸುವ ಹಕ್ಕು ನಿಮಗೆಲ್ಲಿದೆ? ನೀವು ಅರ್ಜಿ ಸಲ್ಲಿಸಿದರೆ ಮಾತ್ರ ನಾವು ಪರಿಗಣಿಸಲು ಸಾಧ್ಯ. ನಿಮಗೆ ಲೋಕಸ್ ಸ್ಟಾ್ಯಂಡೈ ಇಲ್ಲದಿರುವುದರಿಂದ ವಾದ ಮಂಡಿಸಲು ಅವಕಾಶವಿಲ್ಲ ಎಂದರು.

ಎಲ್ಲಿ ಹೇಳಬೇಕೋ ಹೇಳಿದ್ದೇನೆ: ನನಗೆ ಬೆದರಿಕೆ ಇರುವುದರಿಂದ ನಾನು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನ್ಯಾಯಮೂರ್ತಿಯೊಬ್ಬರು ನನ್ನ ಬಳಿ ಬಂದು ವರ್ಗಾವಣೆ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಸಂದೇಶ್, ಆದ್ದರಿಂದಲೇ ನಾನು ಮುಕ್ತ ಕಲಾಪದಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ, ಬೆದರಿಕೆ ಇದೆ. ಈ ಬಗ್ಗೆ ವಿಚಾರಣೆ ನಡೆಯಲಿ ಬಿಡಿ. ಅಂದು ಆ ರೀತಿ ಹೇಳಿರುವ ಸಹ ನ್ಯಾಯಮೂರ್ತಿ ಬಗ್ಗೆ ಎಲ್ಲಿ ಹೇಳಬೇಕೋ ಅಲ್ಲಿ ಎಲ್ಲವನ್ನೂ ಹೇಳಿದ್ದೇನೆ. ಇಲ್ಲಿ ನಾನು ಆ ನ್ಯಾಯಮೂರ್ತಿಯ ಹೆಸರು ಹೇಳುವ ಅಗತ್ಯವಿಲ್ಲ. ಯಾರಿಗೆ ತಿಳಿಸಿದ್ದೇನೆಯೋ ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಬೆದರಿಕೆ ವಿಚಾರ ದಾಖಲು: ಆದೇಶ ಬರೆಸಿದ ನ್ಯಾಯಮೂರ್ತಿ, ಈ ಪ್ರಕರಣವನ್ನು ಜೂ.29 ರಂದು ವಿಚಾರಣೆ ನಡೆಸಿದಾಗ ನಿಜವಾದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದ ಎಸಿಬಿ ಕಾರ್ಯವೈಖರಿಯನ್ನು ಆಕ್ಷೇಪಿಸಲಾಗಿತ್ತು. ಎಸಿಬಿಯ ಅಸಮರ್ಥತೆ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ವಿಚಾರಣೆಯನ್ನು ಜು.4ಕ್ಕೆ ಮುಂದೂಡಲಾಗಿತ್ತು. ಈ ಮಧ್ಯೆ ಜ.1ರಂದು ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಿತುರಾಜ್ ಅವಸ್ಥಿ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಡಿನ್ನರ್ ಆಯೋಜಿಸಲಾಗಿತ್ತು. ಈ ವೇಳೆ ಹಾಲಿ ನ್ಯಾಯಮೂರ್ತಿಯೊಬ್ಬರು ನನ್ನ ಪಕ್ಕ ಬಂದು ಕುಳಿತು, ‘ದೆಹಲಿಯಿಂದ ನನಗೆ ಒಂದು ಕರೆ ಬಂದಿದೆ. ಕರೆ ಮಾಡಿದವರು ನಿಮ್ಮ ಬಗ್ಗೆ ವಿಚಾರಿಸಿದರು’ ಎಂದು ಹೇಳಿದರು. ಅದಕ್ಕೆ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲವಲ್ಲ ಎಂದೆ. ಆದರೆ, ಆ ನ್ಯಾಯಮೂರ್ತಿ ವಿಷಯವನ್ನು ಅಲ್ಲಿಗೇ ನಿಲ್ಲಿಸದೆ, ‘ಎಸಿಬಿ ಎಡಿಜಿಪಿ ಉತ್ತರ ಭಾರತದವರು. ತುಂಬ ಪವರ್​ಫುಲ್ ಆಗಿದ್ದಾರೆ’ ಎಂದು ತಿಳಿಸಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವರ್ಗಾವಣೆ ಉದಾಹರಿಸಿದರು ಎಂದು ತಮ್ಮ ವರ್ಗಾವಣೆ ಬೆದರಿಕೆಯ ವಿಚಾರವನ್ನು ಆದೇಶದಲ್ಲಿ ದಾಖಲಿಸಿದರು.

ಮೆಮೋ ಸಲ್ಲಿಸಿದ ಸಿಬಿಐ: ಬಳ್ಳಾರಿ ಎಸ್​ಪಿ ಆಗಿದ್ದ ಸೀಮಂತ್ ಕುಮಾರ್ ಸಿಂಗ್ ಮನೆ ಮೇಲೆ ಅಕ್ರಮ ಗಣಿಗಾರಿಕೆ ಆರೋಪ ಹಿನ್ನೆಲೆ 2013ರಲ್ಲಿ ನಡೆದಿದ್ದ ಸಿಬಿಐ ದಾಳಿ ಸಂಬಂಧ ವರದಿ ಸಲ್ಲಿಸುವಂತೆ ಕಳೆದ ವಿಚಾರಣೆ ವೇಳೆ ಸಿಬಿಐ ಪರ ವಕೀಲರಿಗೆ ನ್ಯಾಯಪೀಠ ನಿರ್ದೇಶಿಸಿತ್ತು. ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ಸೋಮವಾರ ದಾಖಲೆ ಮತ್ತು ವರದಿಯನ್ನು ಮೆಮೋ ಜತೆಗೆ ಸಲ್ಲಿಸಿ ಸೀಮಂತ್​ಕುಮಾರ್ ವಿರುದ್ಧ ದಾಳಿ ನಡೆದಿತ್ತು. ಪ್ರಕರಣದ ಸಂಬಂಧ ಸಮಗ್ರ ತನಿಖೆ ನಡೆಸುವಂತೆ 2015ರಲ್ಲಿ ಮುಖ್ಯ ಕಾರ್ಯದರ್ಶಿಗೆ ಸಿಬಿಐ ಪತ್ರ ಬರೆದು ಮನವಿ ಮಾಡಿತ್ತು ಎಂದು ತಿಳಿಸಿದರು. ಆಗ, ನಿಮ್ಮ ಮನವಿಗೆ ಸರ್ಕಾರದಿಂದ ಪ್ರತಿಕ್ರಿಯೆ ಬಂದಿದೆಯೇ ಎಂದು ನ್ಯಾಯಪೀಠ ಪ್ರಶ್ನಸಿತು. ನಮ್ಮ ಪತ್ರಕ್ಕೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರಸನ್ನ ಉತ್ತರಿಸಿದರು.

ಎಸಿಬಿ ವಿರುದ್ಧ ಟೀಕೆ ಇಂದು ಸುಪ್ರೀಂ ವಿಚಾರಣೆ

ನವದೆಹಲಿ: ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಾರ್ಯನಿರ್ವಹಣೆಯ ವಿರುದ್ಧ ಮಾತುಗಳನ್ನಾಡಿದ್ದಕ್ಕಾಗಿ ತಮಗೆ ವರ್ಗಾವಣೆ ಬೆದರಿಕೆ ಬಂದಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಆರೋಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಮಂಗಳವಾರ ನಡೆಯಲಿದೆ. ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಸೋಮವಾರ ಈ ವಿಷಯ ಪ್ರಸ್ತಾಪಿಸಿ, ಹೈಕೋರ್ಟ್ ನ್ಯಾಯಾಧೀಶರು ಮಾಡಿದ್ದ ಆರೋಪಗಳ ಬಗ್ಗೆ ನ್ಯಾಯಪೀಠದ ಗಮನ ಸೆಳೆದರು. ಇದನ್ನು ಆಲಿಸಿದ ಸಿಜೆಐ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ ಸೂಕ್ತ ಪೀಠದ ಮುಂದೆ ಪ್ರಕರಣವನ್ನು ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು. ಇದೇ ವೇಳೆ ಎಸಿಜಿ ಮುಖ್ಯಸ್ಥ ಸೀಮಂತ್​ಕುಮಾರ್ ಸಿಂಗ್ ಪರ ವಾದಿಸಿದ ವಕೀಲ ಅಮಿತ್​ಕುಮಾರ್, ತಮ್ಮ ಕಕ್ಷಿದಾರರ ವಿರುದ್ಧ ಹೈಕೋರ್ಟ್ ಕೆಲ ಅನಗತ್ಯ ಟೀಕೆಗಳನ್ನು ಮಾಡಿದ್ದಲ್ಲದೆ, ಸೇವಾ ದಾಖಲೆಗಳನ್ನು ಸಲ್ಲಿಸುವಂತೆಯೂ ಸೂಚಿಸಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದರು. ಹೈಕೋರ್ಟ್ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತಪಡಿಸಿರುವ ಹಿರಿಯ ಅಧಿಕಾರಿ ಸೀಮಂತ್​ಕುಮಾರ್ ಸಿಂಗ್, ಈ ಅನಿಸಿಕೆಗಳನ್ನು ಹೈಕೋರ್ಟ್ ಹಿಂಪಡೆದುಕೊಳ್ಳಲು ನಿರ್ದೇಶನ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.