Suicide Prevention Day 
ನ್ಯೂಸ್

ತಲ್ಲಣಿಸದಿರು ಮನವೇ!..ಬದುಕನ್ನು ಪ್ರೀತಿಸೋಣ: ಆತ್ಮಹತ್ಯೆ ತಡೆ ದಿನ ಇಂದು

ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ಬಿಡುಗಡೆ ಮಾಡುವ "ಭಾರತದಲ್ಲಿನ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು' ವರದಿಯ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ ಸರಾಸರಿ 1.70 ಲಕ್ಷಕ್ಕೂ ಅಧಿಕ ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ. ಅಂದರೆ ದಿನಕ್ಕೆ ಸರಾಸರಿ 465 ಜನರು ತಮ್ಮ ಬದುಕನ್ನೇ ತಾವೇ ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಸರಾಸರಿ ಆತ್ಮಹತ್ಯೆ ಪ್ರಮಾಣ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 12.2ರಿಂದ 12.4ರಷ್ಟಿದೆ. ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ 73% ಪುರುಷರು ಮತ್ತು 27% ಮಹಿಳೆಯರು. ಆದರೆ, ಇಂದಿಗೂ ಬಹುತೇಕ ಜನರು ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಲು, ಆಪ್ತ ಸಮಾಲೋಚಕರು ಮತ್ತು ಮನೋವೈದ್ಯರನ್ನು ಕಾಣಲು ತೀವ್ರ ಹಿಂಜರಿಯುತ್ತಾರೆ ಅಥವಾ ಮುಜುಗರ ಪಡುತ್ತಾರೆ. ದೈಹಿಕ ಆರೋಗ್ಯದ ರಕ್ಷಣೆಯಷ್ಟೇ, ಮಾನಸಿಕ ಆರೋಗ್ಯ ಕೂಡ ಮುಖ್ಯ ಎಂಬುದನ್ನು ಅರಿತರೆ, ಖಿನ್ನತೆ ಮತ್ತು ಆತ್ಮಹತ್ಯೆಯ ಪ್ರಮಾಣವನ್ನು ತಗ್ಗಿಸಬಹುದು.

ಬದುಕಿಗಾಗಿ ಹೋರಾಟ

ಬದುಕಿಗಾಗಿ ಹೋರಾಟ ಅಗತ್ಯ ಮತ್ತು ಅನಿವಾರ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ಒತ್ತಡದ ಬದುಕು, ತೀವ್ರ ಸ್ಪರ್ಧಾತ್ಮಕತೆ, ಆರ್ಥಿಕ ಸಂಕಷ್ಟ, ಒಂಟಿತನದ ಭಾವ, ಖಿನ್ನತೆಯಂಥ ಸಮಸ್ಯೆಗಳಿಂದ ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ. ಬದುಕು ಸಾಗಿಸುವುದಕ್ಕಿಂತ ಬದುಕು ಮುಗಿಸಿಕೊಳ್ಳಲು "ಹೋರಾಟ' ಹೆಚ್ಚುತ್ತಿರುವುದು ಕಳವಳಕಾರಿ ವಿಷಯ. ಭಾರತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವೂ ತೀವ್ರಗತಿಯಲ್ಲಿ ಏರುತ್ತಿದ್ದು, ಪ್ರತಿ ವರ್ಷ 13 ಸಾವಿರ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ. ಆತ್ಮಹತ್ಯೆಯ ಒಟ್ಟಾರೆ ಪ್ರಮಾಣ ವಾರ್ಷಿಕ ಶೇಕಡ 2ರಷ್ಟು ಹೆಚ್ಚುತ್ತಿದ್ದರೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ವಾರ್ಷಿಕ ಶೇ. 4ರಷ್ಟು ಏರುತ್ತಿದ್ದು, ಇದು ದೇಶದಾದ್ಯಂತ ಒಂದು ಪಿಡುಗಾಗಿ ಬೆಳೆಯುತ್ತಿದೆ.
ಖಿನ್ನತೆಯನ್ನು ನಿರ್ಲಕ್ಷಿಸುತ್ತಿರುವುದು ಅಥವಾ ಅವರಿಗೆ ಸೂಕ್ತ ಸ್ಪಂದನೆ ಸಿಗದಿರುವುದು ಆತ್ಮಹತ್ಯೆಯಂಥ ದುಡುಕಿನ ನಿರ್ಧಾರಕ್ಕೆ ಕಾರಣವಾಗುತ್ತಿದೆ. ಖಿನ್ನತೆ ಕಾಣಿಸಿಕೊಂಡ ಆರಂಭದ ಹಂತದಲ್ಲೇ ಮನೋವೈದ್ಯರನ್ನು ಅಥವಾ ಆಪ್ತಸಮಾಲೋಚಕರನ್ನು ಕಾಣಲು ಬಹುತೇಕರು ಹಿಂಜರಿಯುವುದು, ಸಮಸ್ಯೆಯನ್ನು ಮತ್ತಷ್ಟು ಕ್ಲಿಷ್ಟಗೊಳಿಸುತ್ತದೆ. ಖಿನ್ನತೆಯಿಂದ ಆರಂಭಿಕ ಹಂತದಲ್ಲೇ ಹೊರಬರಲು ಸಾಧ್ಯವಿದೆ. ಇದಕ್ಕೆ ಒಂದಿಷ್ಟು ಭಾವನಾತ್ಮಕ ಬೆಂಬಲ, ಸೂಕ್ತ ಚಿಕಿತ್ಸೆ ಹಾಗೂ ಜೀವನಶೈಲಿಯಲ್ಲಿ ಸುಧಾರಣೆ ಅಗತ್ಯ. ನೋವನ್ನು ಎದುರಿಸಿ, ಅದನ್ನು ಮೀರಿನಿಂತರೆ ಮತ್ತೆ ಬದುಕು ಕಟ್ಟಿಕೊಳ್ಳುವ ಅವಕಾಶಗಳು ಸಿಕ್ಕೇ ಸಿಗುತ್ತವೆ. ಆತ್ಮಸ್ಥೈರ್ಯದಿಂದ ಸವಾಲುಗಳ ವಿರುದ್ಧ ಹೋರಾಡುವ ಸಂಕಲ್ಪ ಅಗತ್ಯ. ಮಾನಸಿಕ ಆರೋಗ್ಯದ ರಕ್ಷಣೆಯೂ ಪ್ರಧಾನ ಆದ್ಯತೆಯಾಗಬೇಕಿದೆ. ಯುವಕರ ಮುಂದೆಯಂತೂ ಜೀವನದ ಹಲವು ಅವಕಾಶಗಳಿರುತ್ತವೆ; ಅದನ್ನು ಪರಿಗಣಿಸುವುದನ್ನು ಬಿಟ್ಟು ಸಾವಿನ ಮನೆಯ ಹಾದಿ ಹಿಡಿಯುವುದು ಸರಿಯಲ್ಲ. ಅದಮ್ಯ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಆಶಾವಾದ, ಕಠಿಣ ಪರಿಶ್ರಮ ವ್ಯಕ್ತಿತ್ವದ ಭಾಗವಾಗಬೇಕು.

ವಯೋಮಾನ ಮತ್ತು ವೃತ್ತಿವಾರು ಅಂಕಿಅಂಶಗಳು

18ರಿಂದ 45 ವರ್ಷ ವಯಸ್ಸಿನವರು: ಒಟ್ಟು ಆತ್ಮಹತ್ಯೆಗಳಲ್ಲಿ 65%ರಿಂದ 66%ರಷ್ಟು ಪ್ರಕರಣಗಳು ಈ ವಯೋಮಾನದ ಯುವಕರು ಮತ್ತು ಮಧ್ಯವಯಸ್ಕರದ್ದಾಗಿರುತ್ತವೆ.
18ರಿಂದ 30 ವರ್ಷ: ಒಟ್ಟು ಆತ್ಮಹತ್ಯೆಗಳಲ್ಲಿ 33% ಪ್ರಕರಣಗಳು (ವಿದ್ಯಾರ್ಥಿಗಳು, ಹೊಸದಾಗಿ ಉದ್ಯೋಗ ಹುಡುಕುವವರು, ಯುವಜನರು).
30ರಿಂದ 45 ವರ್ಷ: ಒಟ್ಟು ಆತ್ಮಹತ್ಯೆಗಳಲ್ಲಿ 32% ಪ್ರಕರಣಗಳು (ಕುಟುಂಬ ನಿರ್ವಹಣೆ ಮತ್ತು ಆರ್ಥಿಕ ಜವಾಬ್ದಾರಿ ಹೊತ್ತಿರುವವರು).
ವೃತ್ತಿವಾರು ಗಮನಿಸಿದರೆ, ಅತಿ ಹೆಚ್ಚು ತೊಂದರೆಗೊಳಗಾದವರು ದಿನೇದಿನದ ಕೂಲಿ ಕಾರ್ಮಿಕರು (30%), ನಂತರದ ಸ್ಥಾನಗಳಲ್ಲಿ ಗೃಹಿಣಿಯರು, ಸ್ವಯಂ ಉದ್ಯೋಗಿಗಳು, ರೈತರು/ಕೃಷಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಇದ್ದಾರೆ.

ಆತ್ಮಹತ್ಯೆಗೆ ಪ್ರಮುಖ ಕಾರಣಗಳು

ಕೌಟುಂಬಿಕ ಕಲಹಗಳು, ವೈವಾಹಿಕ ಭಿನ್ನಾಭಿಪ್ರಾಯಗಳು, ವರದಕ್ಷಿಣೆ ಕಿರುಕುಳ ಮತ್ತು ಹೊಂದಾಣಿಕೆಯ ಕೊರತೆ, ದೀರ್ಘಕಾಲದ ದೈಹಿಕ ಕಾಯಿಲೆಗಳು, ತೀವ್ರ ಮಾನಸಿಕ ಖಿನ್ನತೆ, ಒತ್ತಡ ಮತ್ತು ಸಮಯಕ್ಕೆ ಸರಿಯಾಗಿ ಮಾನಸಿಕ ಚಿಕಿತ್ಸೆ ಸಿಗದಿರುವುದು, ಮದ್ಯ ಹಾಗೂ ಇತರ ವ್ಯಸನಗಳಿಂದ ಉಂಟಾಗುವ ಮಾನಸಿಕ ಅಸ್ಥಿರತೆ ಮತ್ತು ಸಾಮಾಜಿಕ ಸಮಸ್ಯೆಗಳು.
ಅತಿಯಾದ ಸಾಲ, ವ್ಯಾಪಾರದಲ್ಲಿ ನಷ್ಟ ಹಾಗೂ ಕೃಷಿ ಬಿಕ್ಕಟ್ಟು, ನಿರೀಕ್ಷಿತ ಅಂಕ ಬಾರದಿರುವುದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವೈಫಲ್ಯ ಹಾಗೂ ಸೂಕ್ತ ಉದ್ಯೋಗ ಸಿಗದಿರುವುದು ಯುವಜನತೆಯಲ್ಲಿ ನಿರಾಶೆಗೆ ಪ್ರಮುಖ ಕಾರಣವಾಗುತ್ತಿದೆ. ಪ್ರೇಮ ವೈಫಲ್ಯ ಮತ್ತು ಸಂಬಂಧಗಳ ಬಿಕ್ಕಟ್ಟಿನಿಂದ ಕೂಡ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ.

ಜಾಗೃತಿಯ ಉದ್ದೇಶ

ಪ್ರತಿ ವರ್ಷ ಸೆಪ್ಟೆಂಬರ್​ 10ರಂದು ವಿಶ್ವದಾದ್ಯಂತ "ವಿಶ್ವ ಆತ್ಮಹತ್ಯೆ ತಡೆ ದಿನ'ವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು 2003ರಲ್ಲಿ ಇಂಟರ್ನ್ಯಾಷನಲ್​ ಅಸೋಸಿಯೇಷನ್​ ಫಾರ್​ ಸುಸೈಡ್​ ಪ್ರಿವೆನ್ಷನ್​ ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವರ್ಲ್ಡ್​ ಫೆಡರೇಷನ್​ ಫಾರ್​ ಮೆಂಟಲ್​ ಹೆಲ್ತ್​ ಸಹಯೋಗದೊಂದಿಗೆ ಆರಂಭಿಸಿತು. ವಿಶ್ವದಾದ್ಯಂತ ವಾರ್ಷಿಕ ಲಕ್ಷಾಂತರ ಸಾವುಗಳಿಗೆ ಆತ್ಮಹತ್ಯೆಯೇ ಪ್ರಮುಖ ಕಾರಣವಾಗಿದ್ದು, ಇದೊಂದು ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ ಎಂಬುದನ್ನು ಮನಗಂಡು, ಜಾಗೃತಿ ಮೂಡಿಸಲು ಈ ದಿನವನ್ನು ನಿಗದಿಪಡಿಸಲಾಗಿದೆ. ಸೆ.10ರಂದು ರಾತ್ರಿ 8 ಗಂಟೆಗೆ ಕಿಟಕಿಯ ಬಳಿ ಮೇಣದಬತ್ತಿ ಅಥವಾ ದೀಪ ಬೆಳಗಿಸಿ, ಆತ್ಮಹತ್ಯೆಯಿಂದ ಮೃತಪಟ್ಟವರನ್ನು ಸ್ಮರಿಸುವುದು ಹಾಗೂ ಬದುಕುಳಿದವರಿಗೆ ಭರವಸೆ ನೀಡುವುದು ಜಾಗತಿಕ ಸಂಪ್ರದಾಯ.

ಮಹತ್ವ

ಆತ್ಮಹತ್ಯೆ ಅನಿವಾರ್ಯವಲ್ಲ, ಸಕಾಲಿಕ ಮಾತುಕತೆ ಮತ್ತು ಮಾನಸಿಕ ನೆರವಿನಿಂದ ಜೀವಗಳನ್ನು ಉಳಿಸಬಹುದು ಎಂಬ ಸತ್ಯವನ್ನು ಸಮಾಜಕ್ಕೆ ಮುಟ್ಟಿಸುವುದು.
ಮಾನಸಿಕ ಸಮಸ್ಯೆಗಳು, ಖಿನ್ನತೆ ಅಥವಾ ಆತ್ಮಹತ್ಯೆಯ ಆಲೋಚನೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ತಪ್ಪಲ್ಲ ಎಂಬ ವಾತಾವರಣ ಸೃಷ್ಟಿಸುವುದು.
ಸರ್ಕಾರಗಳು ರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ಮಾನಸಿಕ ಆರೋಗ್ಯ ನೀತಿ ರೂಪಿಸಲು ಮತ್ತು ಬಜೆಟ್​ನಲ್ಲಿ ಸೂಕ್ತ ಆದ್ಯತೆ ನೀಡಲು ಪ್ರೇರೇಪಿಸುವುದು.

ಆಶಾವಾದ ಮತ್ತು ಸಹಾನುಭೂತಿ

ಸೋಲನ್ನು ಸ್ವೀಕರಿಸುವ ಮನೋಭಾವ, ಈ ಸ್ಥಿತಿಯನ್ನು ಗೆದ್ದು ಬರುತ್ತೇನೆ ಎಂಬ ಸ್ಥೈರ್ಯ, ಮುಂದೆ ತನಗಾಗಿ ನೆಮ್ಮದಿಯ ನಿಲ್ದಾಣ ಕಾದಿದೆ ಎಂಬ ಆಶಾವಾದವನ್ನು ರೂಢಿಸಿಕೊಂಡರೆ ಬದುಕು ಅರಳಬಲ್ಲದು. ಆದರೆ, ಇಂಥ ಮನೋಬಲವನ್ನು ತುಂಬುವ ಭಾವನಾತ್ಮಕ ಬೆಂಬಲ ಹೆಚ್ಚಬೇಕಿದೆ. ಸಮಾಜ ಕೂಡ ಯಶಸ್ಸಿನ ಮಾನದಂಡಗಳನ್ನು ಅವಲೋಕಿಸಿಕೊಳ್ಳಲು ಇದು ಸೂಕ್ತ ಸಮಯ. ಅಷ್ಟಕ್ಕೂ, ಆ ವಿಧಿ ಎಂಬುದು ಎಲ್ಲರಿಗೂ ಬದುಕು ಕಟ್ಟಿಕೊಳ್ಳಲು ಒಂದಿಲ್ಲ ಒಂದು ಅವಕಾಶ ನೀಡುತ್ತದೆ ಎಂಬ ಸರಳಸತ್ಯವನ್ನು ಮನಗಂಡರೆ ಸಾಕು. ಸೋಲನ್ನೂ ಸಂಭ್ರಮಿಸಿ, ಹೊಸ ವಿಜಯಕ್ಕೆ ಸಿದ್ಧತೆ ನಡೆಸಿದರೆ ಸಮಸ್ಯೆಗಳೆಲ್ಲ ಸೋತು ಹೋಗುತ್ತವೆ. ಬದುಕು ಗೆಲ್ಲುತ್ತದೆ.

ಸಹಾನುಭೂತಿಯಿಂದ ಆಲಿಸಿ:

ಯಾವುದೇ ತೀರ್ಪು ನೀಡದೆ ದುಃಖಿತರ ಮಾತುಗಳನ್ನು ಪೂರ್ತಿಯಾಗಿ ಆಲಿಸಿ. ಅವರ ನೋವನ್ನು ಹಗುರವಾಗಿ ಕಾಣಬೇಡಿ; ಇಷ್ಟಕ್ಕೇ ಹೀಗೆ ಮಾಡಿಕೊಳ್ಳಬಹುದೇ? ಎಂದು ಅಸಡ್ಡೆ ತೋರಬೇಡಿ.
"ನೀವು ತೀವ್ರ ನೋವಿನಲ್ಲಿದ್ದೀರಾ?', "ಆತ್ಮಹತ್ಯೆಯ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರುತ್ತಿವೆಯೇ?' ಎಂದು ನೇರವಾಗಿ ಕೇಳಲು ಹಿಂಜರಿಯಬೇಡಿ. ಸಂಶೋಧನೆಗಳ ಪ್ರಕಾರ, ನೇರವಾಗಿ ಕೇಳುವುದರಿಂದ ಅವರ ಮನಸ್ಸಿನ ಭಾರ ಕಡಿಮೆಯಾಗುತ್ತದೆಯೇ ಹೊರತು ಅಪಾಯ ಹೆಚ್ಚಾಗುವುದಿಲ್ಲ.
ವ್ಯಕ್ತಿಯ ಮಾನಸಿಕ ಸ್ಥಿತಿ ಗಂಭೀರವಾಗಿದೆ ಎಂದೆನಿಸಿದರೆ, ಅವರನ್ನು ಒಂಟಿಯಾಗಿ ಇರಲು ಬಿಡಬೇಡಿ. ಅವರ ಸುತ್ತಮುತ್ತಲಿರುವ ಹರಿತವಾದ ವಸ್ತುಗಳು, ಔಷಧಗಳು ಅಥವಾ ಹಾನಿ ಉಂಟುಮಾಡಬಹುದಾದ ಸಾಧನಗಳನ್ನು ತೆರವುಗೊಳಿಸಿ. ತಕ್ಷಣವೇ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಮನವೊಲಿಸಿ. ಭಾರತ ಸರ್ಕಾರದ ಉಚಿತ ಮತ್ತು 24/7 ಲಭ್ಯವಿರುವ ಟೆಲಿ&ಮನಸ್​ ಸಹಾಯವಾಣಿ ಸಂಖ್ಯೆ 14416 ಅಥವಾ 1800 891 4416ಗೆ ಕರೆ ಮಾಡಲು ಅವರಿಗೆ ನೆರವಾಗಿ.
ಆತ್ಮಹತ್ಯೆಯ ಆಲೋಚನೆಗಳು ಒಬ್ಬ ವ್ಯಕ್ತಿಯಲ್ಲಿ ಏಕಾಏಕಿ ಹುಟ್ಟಿಕೊಳ್ಳುವುದಿಲ್ಲ; ಬಹುತೇಕ ಸಂದರ್ಭಗಳಲ್ಲಿ ಆ ವ್ಯಕ್ತಿಯ ನಡವಳಿಕೆ, ಮಾತು ಮತ್ತು ದೈನಂದಿನ ಅಭ್ಯಾಸಗಳಲ್ಲಿ ಸೂಕ್ಷ್ಮ ಮುನ್ಸೂಚನೆಗಳು ಕಂಡುಬರುತ್ತವೆ. ಇವುಗಳನ್ನು ಸಕಾಲದಲ್ಲಿ ಗುರುತಿಸಿ ಸ್ಪಂದಿಸುವುದರಿಂದ ಅಮೂಲ್ಯ ಜೀವವನ್ನು ಉಳಿಸಬಹುದು.
ತೀವ್ರ ಒಂಟಿತನ ಮತ್ತು ಹಿಂಜರಿಕೆ: ಕುಟುಂಬ, ಸ್ನೇಹಿತರು ಮತ್ತು ಸಾಮಾಜಿಕ ಕೂಟಗಳಿಂದ ಸಂಪೂರ್ಣವಾಗಿ ದೂರವಿರುವುದು. ಒಂದು ಕೋಣೆಯೊಳಗೆ ಸೀಮಿತವಾಗುವುದು, ಫೋನ್​ ಕರೆ ಅಥವಾ ಸಂದೇಶಗಳಿಗೆ ಸ್ಪಂದಿಸದಿರುವುದು.
ನಡವಳಿಕೆಯ ಬದಲಾವಣೆಗಳು: ವ್ಯಕ್ತಿ ತನಗೆ ಅತಿಯಾಗಿ ಇಷ್ಟವಾದ ಕೆಲಸಗಳು ಅಥವಾ ಹವ್ಯಾಸಗಳಲ್ಲಿ ಹಠಾತ್ತಾಗಿ ಆಸಕ್ತಿ ಕಳೆದುಕೊಳ್ಳುವುದು. ನಿದ್ರಾಹಿನತೆ ಅಥವಾ ಅತಿಯಾಗಿ ಮಲಗುವುದು. ತೀವ್ರ ಹಸಿವಿನ ಕೊರತೆ ಅಥವಾ ಅತಿಯಾಗಿ ತಿನ್ನುವುದು. ಆಲ್ಕೋಹಾಲ್​, ಧೂಮಪಾನ ಅಥವಾ ಇತರ ಮಾದಕವಸ್ತುಗಳ ಅತಿಯಾದ ಬಳಕೆ. ಅಥವಾ ತನಗೆ ಪ್ರಿಯವಾದ ದುಬಾರಿ ಅಥವಾ ಮೌಲ್ಯಯುತ ವಸ್ತುಗಳನ್ನು ಇತರರಿಗೆ ಉಡುಗೊರೆಯಾಗಿ ನೀಡುವುದು. ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಎಲ್ಲರಿಗೂ ಮೇಲಿಂದ ಮೇಲೆ ಕ್ಷಮೆ ಕೋರುವುದು ಅಥವಾ ವಿದಾಯ ಹೇಳುವ ರೀತಿಯಲ್ಲಿ ವರ್ತಿಸುವುದು.