ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಕಚೇರಿ ಮತ್ತು ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲು ವಿನಾಕಾರಣ ಭೇಟಿ ನೀಡುವ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಇಲಾಖೆ ವ್ಯಾಪ್ತಿಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂಸ್ಕೃತ ಕಾಲೇಜು, ಚಿತ್ರಕಲಾ ಕಾಲೇಜು, ಶಿಕ್ಷಣ ಕಾಲೇಜು ಹಾಗೂ ಕಾನೂನು ಕಾಲೇಜು ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವಿವಿಧ ಕಾರಣಗಳಿಂದ ತಮ್ಮ ಕೆಲಸ ಕಾರ್ಯಗಳಿಗಾಗಿ ಸಂಬಂಧಪಟ್ಟ ಪ್ರಾಧಿಕಾರದಿಂದ ರಜೆ ಪಡೆಯದೇ ಕುಟುಂಬ ಸದಸ್ಯರೊಂದಿಗೆ ಕೇಂದ್ರ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ಕಾಲೇಜಿನ ವಿದ್ಯಾರ್ಥಿಗಳ ಹಿತಾಸಕ್ತಿಗೆ ಧಕ್ಕೆ ಉಂಟಾಗುವುದಲ್ಲದೇ ಶೈಕ್ಷಣಿಕ ಚಟುವಟಿಕೆಗಳು ಕುಂಠಿತವಾಗುತ್ತಿರುವುದನ್ನು ಗಂಭೀರವಾಗಿ ಗಮನಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಸಿಬ್ಬಂದಿ ತಮ್ಮ ಕಾರ್ಯಕ್ಕಾಗಿ ಕೇಂದ್ರ ಕಚೇರಿಗೆ ಅನಗತ್ಯವಾಗಿ ಭೇಟಿ ನೀಡದಿರಲು ಸೂಚಿಸಲಾಗಿದೆ. ತಮ್ಮ ಕುಂದು ಕೊರತೆ ನಿವಾರಣೆಗಾಗಿ ಸರ್ಕಾರಿ ಕಾಲೇಜುಗಳ ಸಿಬ್ಬಂದಿ ತಮಗೆ ಸಂಬಂಧಪಟ್ಟ ಪ್ರಾಂಶುಪಾಲರ ಮುಖಾಂತರ ಹಾಗೂ ಅನುದಾನಿತ ಕಾಲೇಜುಗಳ ಸಿಬ್ಬಂದಿಯು ತಮ್ಗೆ ಸಂಬಂಧಪಟ್ಟ ಪ್ರಾದೇಶಿಕ ಜಂಟಿ ನಿರ್ದೇಶಕರಿಂದ ಮನವಿ/ಕೋರಿಕೆಗಳನ್ನು ಸಲ್ಲಿಸಲು ಸೂಚಿಸಿದೆ.