ನ್ಯೂಸ್

Annadurai AI Video | ಅಣ್ಣಾದೊರೈ ಎಐ ವಿಡಿಯೋ ಪೋಸ್ಟ್​​ ಮಾಡಿದ ಟಿವಿಕೆ; ಇದು ಅಗ್ಗದ ಪ್ರಚಾರ ಎಂದು ಡಿಎಂಕೆ ತಿರುಗೇಟು!

Annadurai AI Video: ತಮಿಳುನಾಡು ನಿಧಾನವಾಗಿ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದು, ಪ್ರತಿಯೊಂದು ಪಕ್ಷಗಳು ಪ್ರಚಾರ ಕಣಕ್ಕೆ ಧುಮುಕಿವೆ. ಇತ್ತೀಚೆಗೆ ಇದು ನಾಟಕೀಯ ತಿರುವು ಪಡೆದುಕೊಂಡಿದ್ದು, ನಟ-ರಾಜಕಾರಣಿ ವಿಜಯ್ ತಮ್ಮ ತಮಿಳಗ ವೆಟ್ರಿ ಕಳಗಂ, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ, ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈರ ಕೃತಕ ಬುದ್ಧಿಮತ್ತೆ ಆಧಾರಿತ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ತೀರುಗೇಟು ನೀಡಿರುವ ಡಿಎಂಕೆ ಇದು ಅಗ್ಗದ ಪ್ರಚಾರದ ತಂತ್ರ ಎಂದು ಕರೆದಿದೆ.

ಈ ವಿಷಯವಾಗಿ ಮಾತನಾಡಿರುವ ಡಿಎಂಕೆ ವಕ್ತಾರ ಎ ಸರವಣನ್, ಓಳ್ಳೆಯ ಉದ್ದೇಶಕ್ಕಾಗಿ ಬಳಸಬೇಕಾದ ಸಾಧನಗಳನ್ನು ಟಿವಿಕೆ ರಾಜಕೀಯ ಲಾಭಕ್ಕಾಗಿ ಮತ್ತು ಅಗ್ಗದ ತಂತ್ರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

1967 ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಾಗ, ತಮಿಳು ಯುವಕರು ಮತ್ತು ಯುವತಿಯರು ತನ್ನನ್ನು ಗೆಲುವಿನತ್ತ ಕೊಂಡೊಯ್ದಿದ್ದು, 2026 ರಲ್ಲಿ ಅದೇ ಪುನರಾವರ್ತನೆಯಾಗಲಿದೆ ಎಂದು 'ಅಣ್ಣದುರೈ' ಘೋಷಿಸುವುದನ್ನು ಈ ವೀಡಿಯೊ ತೋರಿಸಿದೆ.

ವಿಡಿಯೋದಲ್ಲಿರುವುದೇನು..?

ಟಿವಿಕೆ ಈ ವಿಡಿಯೋವನ್ನು ತಮ್ಮ ಪರವಾದ ಪ್ರಚಾರದ ತಂತ್ರವಾಗಿ ಬಳಸಿಕೊಂಡಿದ್ದು, ಹಿರಿಯ ನಾಯಕ ಅಣ್ಣಾದೊರೈ ನಟ ವಿಜಯ್​ರನ್ನು ಬೆಂಬಲಿಸಿ ಹೊಗಳಿರುವುದನ್ನು ಕಾಣಬಹುದು.

ಎರಡು ನಿಮಿಷ, 32 ಸೆಕೆಂಡುಗಳ ಈ ವೀಡಿಯೊ ದಕ್ಷಿಣ ರಾಜ್ಯದಲ್ಲಿ ಸೂಕ್ಷ್ಮ ವಿಷಯವಾಗಿದ್ದು, ಇದರಲ್ಲಿ AI ಅಣ್ಣಾದೊರೈ, "1967 ರಲ್ಲಿ ಅಂದಿನ ಯುವಕರು ನನ್ನ ಜೊತೆ ಬೆಂಬಲವಾಗಿ ನಿಂತರು, ಅದೇ ರೀತಿ ಇಂದಿನ ಯುವಕರು ನಿಮ್ಮ (ವಿಜಯ್) ಬೆನ್ನಿಗಿದ್ದಾರೆ. ನನ್ನಂತೆಯೇ, ನೀವು ಕೂಡ ಕಠಿಣ ಪರಿಶ್ರಮದ ಮೂಲಕ ಮೇಲೆ ಬಂದಿದ್ದೀರಿ. ಕಾರ್ಮಿಕ ವರ್ಗದ ಹಸಿವು ಮತ್ತು ಅಗತ್ಯಗಳನ್ನು ನೀವು ತಿಳಿದಿದ್ದೀರಿ, ಅದಕ್ಕಾಗಿಯೇ ನಾನು ನಿಮ್ಮನ್ನು ರಾಜ್ಯವನ್ನು ಮುನ್ನಡೆಸುವಂತೆ ಆಹ್ವಾನಿಸುತ್ತೇನೆ ಎಂದು ಹೇಳಿದ್ದಾರೆ.

ನೀವು ಪೆರಿಯಾರ್ ಅವರನ್ನು ನಿಮ್ಮ 'ನೀತಿ ನಾಯಕ' ಎಂದು ಗುರುತಿಸಿದ ವಿಷಯ ಕೇಳಿ, ನಿಮ್ಮ ಸಮಾನತೆಯ ರಾಜಕೀಯವು ಸರಿಯಾದ ಹಾದಿಯಲ್ಲಿದೆ ಎಂದು ನನಗೆ ಅರ್ಥವಾಗಿದೆ. ನನ್ನ ಹೆಸರು ಬಳಸಿಕೊಂಡ ನನ್ನ ಮಕ್ಕಳು ತಮ್ಮ ಉನ್ನತಿಗಾಗಿ ಮಾತ್ರ ಕೆಲಸ ಮಾಡಿದರೇ ಹೊರತು, ಜನರ ಕಲ್ಯಾಣಕ್ಕೆ ಶ್ರಮಿಸಿಲ್ಲ, ವಿಜಯ್ ಅವರ ದೃಷ್ಟಿಕೋನ ಅಣ್ಣಾದೊರೈ ಅವರ ದಾರಿಯಲ್ಲಿದೆ ಎಂದು ಎಲ್ಲರೂ ಹೇಳಲಿ... ಟಿವಿಕೆ ಗೆಲ್ಲಲಿ ಎನ್ನುವುದು ವಿಡಿಯೋದಲ್ಲಿದೆ.

ಟಿವಿಕೆಯ ಅಣ್ಣಾದೊರೈ ಎಐ ವೀಡಿಯೊ ಬಗ್ಗೆ ಎಐಎಡಿಎಂಕೆ ಮೌನವಾಗಿದ್ದು, ಎರಡು ದೊಡ್ಡ ದ್ರಾವಿಡ ರಾಜಕೀಯ ಪಕ್ಷಗಳಲ್ಲಿ ಒಂದರ ಬೆಂಬಲ ತನಗೆ ಬೇಕು ಎಂದು ಅರಿತುಕೊಂಡಿರುವ ನಟ ವಿಜಯ್, ಮೈತ್ರಿಗಾಗಿ ಪಕ್ಷದ ಬಾಗಿಲನ್ನು ತೆರೆದೆ ಇಟ್ಟಿದ್ದಾರೆ ಎಂಬ ಊಹಾಪೋಹಗಳಿಗೆ ಈ ನಡೆ ಉತ್ತೇಜನ ನೀಡಿದೆ.(ಏಜೆನ್ಸೀಸ್​​)