ನ್ಯೂಸ್

ಸಂಚಲನ ಸೃಷ್ಟಿಸಿದ ಡಿಕೆಶಿ ನಡೆ; ಪಕ್ಷದ ಶತ ಕಚೇರಿ ಶಂಕುಸ್ಥಾಪನೆ ಬಳಿಕ ಬದಲಾವಣೆ ಸುಳಿವು

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಪವರ್ ಶೇರಿಂಗ್ ವಿಚಾರ ಮತ್ತೆ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಸಂಚಲನದ ಬೆನ್ನಲ್ಲೇ ಇದೀಗ ಡಿ.ಕೆ.ಶಿವಕುಮಾರ್ ಅವರ ನಡೆ ಕೂಡ ಕುತೂಹಲಕಾರಿಯಾಗಿ ಕಾಣಿಸಿದೆ.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ತಯಾರಿ ಹಾಗೂ ಸರ್ಕಾರ ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಸಂಭ್ರಮಾಚರಣೆ ಉದ್ದೇಶಕ್ಕೆ ಕರೆದಿದ್ದ ಪಿಸಿಸಿ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕಗಳ ಮುಖಂಡರ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಎರಡು ಪ್ರಮುಖ ಸಂಗತಿಗಳನ್ನು ಪ್ರತ್ಯಕ್ಷ, ಪರೋಕ್ಷವಾಗಿ ಹೊರಹಾಕಿದ್ದು, ಪಕ್ಷದಲ್ಲೂ ಸಂಚಲನ ಮೂಡಿಸಿದೆ. ಸಭೆಯಲ್ಲಿ ವಿವಿಧ ವಿಷಯ ಚರ್ಚೆಯಾಗುತ್ತಿದ್ದ ವೇಳೆ, ಕೆಲವರು ಎರಡು ಹುದ್ದೆಯಲ್ಲಿದ್ದಾರೆ ಎಂಬ ಅಂಶ ಪ್ರಸ್ತಾಪವಾಗಿದೆ. ಈ ಸಂದರ್ಭದಲ್ಲಿ, ನಾನೂ ಸಹ ಪಕ್ಷದ ಅಧ್ಯಕ್ಷನಾಗಿದ್ದು ಸಚಿವನೂ ಆಗಿದ್ದೇನೆ. ಖರ್ಗೆಯವರೂ ಇದ್ದಾರೆ. ರಾಜ್ಯದ 100 ಸ್ಥಳಗಳಲ್ಲಿ ಪಕ್ಷದ ಕಚೇರಿಗೆ ಶಂಕುಸ್ಥಾಪನೆ ಬಳಿಕ ನಾನು ಮುಕ್ತನಾಗುತ್ತೇನೆ. ಯಾರು ಬೇಕಾದರೂ ಜವಾಬ್ದಾರಿ ತೆಗೆದುಕೊಳ್ಳಬಹುದು ಎಂದರು.

ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರಿಗೆ ಸಮಯ ಕೇಳಿದ್ದು, ಇನ್ನೊಂದು ತಿಂಗಳಲ್ಲೇ ಏಕಕಾಲದಲ್ಲಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರುವುದು. ಅದಾದ ಬಳಿಕ ನನ್ನ ದೊಡ್ಡ ಜವಾಬ್ದಾರಿ ಮುಗಿಯಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಐದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಮಧ್ಯ ಕರ್ನಾಟಕದಲ್ಲಿ ದೊಡ್ಡ ಸಮಾವೇಶ ನಡೆಸುವುದಕ್ಕೂ ನಿರ್ಧರಿಸಲಾಗಿದೆ. ಈ ಅಂಶವೂ ಸಭೆಯಲ್ಲಿ ಪ್ರಸ್ತಾಪವಾಗಿದೆ. ಇದು ಶಕ್ತಿಪ್ರದರ್ಶನ ಎಂದು ವ್ಯಾಖ್ಯಾನವೂ ನಡೆದಿದೆ. ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುನ್ನ ದಾವಣಗೆರೆಯಲ್ಲಿ ಸಮಾವೇಶ ನಡೆಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಸಂಘಟನೆಯಲ್ಲಿ ನ್ಯಾಯ: ಇನ್ನು ಪಕ್ಷದ ಎಲ್ಲಾ ಹಂತದಲ್ಲೂ ಒಕ್ಕಲಿಗರ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ನ್ಯಾಯ ಕಡಿಮೆಯಾಗಿದೆ. ಮುಂಚೂಣಿ ಘಟಕಗಳಲ್ಲೂ ಒಕ್ಕಲಿಗರಿಗೆ ಅವಕಾಶ ಸಿಗುತ್ತಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಗಿದೆ. ಇದು ತಮ್ಮ ಗಮನಕ್ಕೆ ಬಂದಿಲ್ಲ. ಒಂದೊಂದು ಸೇರಿಕೊಂಡು ಬೆಳೆದಿದೆ. ಪಕ್ಷವು ಸಾಮಾಜಿಕ ನ್ಯಾಯಕ್ಕೆ ಬೆಲೆ ಕೊಡುತ್ತದೆ. ಈ ವ್ಯತ್ಯಾಸವನ್ನು ಸರಿಪಡಿಸ ಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ವಾಗ್ದಾನ ಮಾಡಿದ್ದಾರೆ.

ಚುನಾವಣೆ, ಸಂಭ್ರಮಾಚರಣೆ ತಯಾರಿ: ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಸಂಭ್ರಮಾಚರಣೆ ನಡೆಸುವ ವಿಚಾರವನ್ನು ಡಿ.ಕೆ. ಶಿವಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷರನ್ನು ಒಳಗೊಂಡ ಎಂಟು ಪ್ರಮುಖ ನಾಯಕರ ಸಮಿತಿ ಸಂಭ್ರಮಾಚರಣೆಯ ರೂಪುರೇಷೆ ಸಿದ್ಧಪಡಿಸುತ್ತಿದೆ. ಇದಾದ ಬಳಿಕ ಎಲ್ಲರನ್ನೂ ಒಳಗೊಂಡಂತೆ ರಾಜ್ಯದ ಉದ್ದಗಲಕ್ಕೂ ವಿವಿಧ ಸ್ವರೂಪದ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಹಾಗೆಯೆ, ಪದಾಧಿಕಾರಿಗಳು, ಜಿಲ್ಲಾ ಘಟಕಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ತಯಾರಾಗಬೇಕು. ತಮಗೆ ಜವಾಬ್ದಾರಿ ಇರುವ ಕ್ಷೇತ್ರಗಳಲ್ಲಿ ತಕ್ಷಣವೇ ಸಿದ್ಧತೆ ಮಾಡಿಕೊಳ್ಳಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಬೇಕೆಂದು ಸೂಚಿಸಿದ್ದಾರೆ.

ಮಂತ್ರಿಗಳ ವಿರುದ್ಧ ಅಸಮಾಧಾನ: ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಾಸಕರು ಅಸಮಾಧಾನ ಹೊರಹಾಕಿದ ಬೆನ್ನಲ್ಲೇ, ಜಿಲ್ಲಾ ಮಂತ್ರಿಗಳ ಕಾರ್ಯವೈಖರಿಗೆ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಮಂತ್ರಿಗಳು ಪಕ್ಷದ ಜಿಲ್ಲಾ ಘಟಕವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಮ್ಮ ಕೆಲಸ ಆಗುತ್ತಿಲ್ಲ ಎಂದು ಸಭೆಯಲ್ಲಿ ಅಸಮಾಧಾನದ ದನಿ ಹೊರಬಂದಿದೆ. ಕೂಡಲೇ ಈ ಸಮಸ್ಯೆಗೆ ಸ್ಪಂದಿಸುತ್ತೇನೆ. ಜಿಲ್ಲಾ ಕಚೇರಿಗೆ ಸಚಿವರು ಭೇಟಿಕೊಡಬೇಕು, ಜಿಲ್ಲಾ ಘಟಕವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಸೂಚಿಸುವುದಾಗಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಗೇಟ್​ಪಾಸ್: ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲಿ ಅನೇಕರು ಸಕ್ರಿಯರಾಗಿಲ್ಲ. ಕೆಲವರು ಬೇರೆಬೇರೆ ಶಿಫಾರಸುಗಳ ಮೂಲಕ ತೂರಿಕೊಂಡಿದ್ದಾರೆ. ಅವರ ಪೈಕಿ ನಿಷ್ಕ್ರಿಯರಾದವರನ್ನು ಮುಲಾಜಿಲ್ಲದೇ ಜವಾಬ್ದಾರಿಯಿಂದ ಮುಕ್ತಮಾಡಲಾಗುತ್ತದೆ ಎಂದು ಸಭೆಯಲ್ಲಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಕುರಿತು ದೆಹಲಿ ಮಟ್ಟದಲ್ಲಿ ಯಾವುದೇ ಚರ್ಚೆ ಇಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ. ಈ ವಿಷಯದಲ್ಲಿ ಯಾವುದೇ ಗೊಂದಲವೂ ಇಲ್ಲ.

| ಅಭಿಷೇಕ್ ಮನು ಸಿಂಘಿ ಎಐಸಿಸಿ ವಕ್ತಾರ