ನ್ಯೂಸ್

ಮುಂದಿನ ಅವಧಿಯಲ್ಲಿ ಡಿಕೆಶಿ ಸಿಎಂ; ಶಿವಲಿಂಗೇಗೌಡ ಪ್ರತಿಪಾದನೆ

ಬೆಂಗಳೂರು: ಡಿ.ಕೆ ಶಿವಕುಮಾರ್ ಅವರಿಗೂ ಸಿಎಂ ಆಗುವ ಆಸೆ ಇದೆ. ಅವರೂ ಸಾಕಷ್ಟು ಕೆಲಸ ಮಾಡಿಕೊಂಡು ಬಂದಿದ್ದಾರೆ. ಮುಂದೊಂದು ದಿನ ಸಿಎಂ ಆಗುತ್ತಾರೆ. ಮುಂದಿನ ಅವಧಿಗೆ ಸರ್ಕಾರ ತಂದು ಸಿಎಂ ಆಗುತ್ತಾರೆ. ಅವರಿಗೆ ಸಿಎಂ ಆಗುವ ತಾಕತ್ತು ಇದೆ ಎಂದು ಅರಸಿಕೆರೆ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಸ್ಥಾನದ ಆಸೆ ಇರುವುದೂ ತಪ್ಪೇನಲ್ಲ. 30-40 ವರ್ಷದಿಂದ ಕೆಲಸ ಮಾಡಿದವರಿದ್ದಾರೆ. ಹಾಗಾಗಿ ಕೆಲ ನಾಯಕರು ಸಿಎಂ ಆಸೆ ವ್ಯಕ್ತಪಡಿಸಿದ್ದಾರೆ. ಆಸೆಪಡುವುದು ತಪ್ಪೂ ಅಲ್ಲ. ಆದರೆ ಸಿದ್ದರಾಮಯರನ್ನುತೆಗೆದು ನಮಗೆ ಕೊಡಿ ಅಂತಾ ಯಾರೂ ಕೇಳುತ್ತಿಲ್ಲ. ಐದೂ ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಮುಂದೆ ಪಕ್ಷ ಅಧಿಕಾರಕ್ಕೆ ಬಂದ ನಂತರ ಯಾರು ಬೇಕಾದರೂ ಸಿಎಂ ಆಗಲಿ ಬೇಡ ಅಂದವರು ಯಾರು? ಎಂದು ಸ್ವಪಕ್ಷೀಯ ಸಿಎಂ ಆಕಾಂಕ್ಷಿಗಳನ್ನು ಕುಟುಕಿದರು.
ಸಿದ್ದರಾಮಯ್ಯ 40 ವರ್ಷಗಳಿಂದ ರಾಜಕಾರಣದಲ್ಲಿ ಇದ್ದಾರೆ. ಯಾವುದೇ ಕಳಂಕ ಹೊಂದಿಲ್ಲದೆ ರಾಜಕಾರಣ ಮಾಡಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿಯನ್ನು ನೋಡಿ ಜನರು ಮತ ಹಾಕುತ್ತಿದ್ದರು. ಅದೇ ರೀತಿ ಈಗ ಸಿದ್ದರಾಮಯ್ಯ ಪಕ್ಷ ಎಂದು ಜನರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಇದೇ ಕಾರಣಕ್ಕೆ ಪ್ರತಿಪಕ್ಷಗಳಿಗೆ ಭಯ ಶುರುವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯನವರ ಮುಂದೆ ರಾಜಕಾರಣ ಮಾಡಲು ಆಗುವುದಿಲ್ಲ, ಇದೇ ಕಾರಣಕ್ಕೆ ಪ್ರತಿಪಕ್ಷಗಳು ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎಂದ ಅವರು ಯಾವ ಬ್ರಹ್ಮ ಬಂದರೂ ಸಿದ್ದರಾಮಯ್ಯ ಸರ್ಕಾರವನ್ನ ಕೆಡವಲು ಸಾಧ್ಯವೇ ಇಲ್ಲ ಎಂದರು.
ಸಚಿವಾಕಾಂಕ್ಷೆ
ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರೋದು ನಾನು ಮಾತ್ರ. ಸಚಿವ ಸ್ಥಾನ ಕೊಟ್ಟರೆ ಪಕ್ಷ ಸಂಘಟನೆಗೆ ಅನುಕೂಲ ಆಗಲಿದೆ ಎಂದು ಶಿವಲಿಂಗೇಗೌಡರು ಸಚಿವಾಕಾಂಕ್ಷೆಯ ಬೇಡಿಕೆ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅತಿರಥ ದೇವೇಗೌಡರ ಕುಟುಂಬವನ್ನು ಸೋಲಿಸಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಿಕೊಂಡಿದ್ದೇವೆ. ಮಂತ್ರಿ ಸ್ಥಾನ ನೀಡುವುದಾಗಿ ಹೇಳಿಯೇ ನನ್ನನ್ನ ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದಾರೆ. ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಕೊಡುತ್ತಾರೆ ಎಂದರು.