ನ್ಯೂಸ್

ಬಿಜೆಪಿ ಮುಕ್ತ ಭಾರತಕ್ಕೆ ಸಜ್ಜಾಗಲು ಕರೆ ನೀಡಿದ ಡಿಕೆಶಿ

ಬೆಂಗಳೂರು: ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿ ಅವರು ಹೇಳುತ್ತಿದ್ದರು. ಈಗ ನೀವೆಲ್ಲಾ ಬಿಜೆಪಿ ಮುಕ್ತ ಭಾರತಕ್ಕೆ ಸಜ್ಜಾಗಬೇಕು ಎಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಕರೆ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆಯಲ್ಲಿ ಮಾತನಾಡಿದ ಅವರು ಮಹಾತ್ಮ ಗಾಂಧಿ ಅವರು ಬ್ರಿಟೀಷರನ್ನ ಭಾರತ ಬಿಟ್ಟು ತೊಲಗಿ ಎನ್ನುವ ಹೋರಾಟಕ್ಕೆ 81 ವರ್ಷ ಆಗಿದೆ. ಈಗ ಮತ್ತೆ 8 ದಶಕಗಳ ನಂತರ ಭಾರತ ಬಿಟ್ಟು ತೊಲಗಿ ಎನ್ನುವ ಹೋರಾಟ ಮತ್ತೆ ಆರಂಭವಾಗಿದೆ. ಅಂದು ಬ್ರಿಟೀಷರ ವಿರುದ್ದ ಹೋರಾಟ ಮಾಡಿದ್ದೆವು. ಇಂದು ಕೋಮುವಾದಿ, ಸರ್ವಾಧಿಕಾರಿ ಸರ್ಕಾರ ತೊಲಗಿಸಲು ಹೋರಾಟ ಮಾಡಬೇಕಾಗಿದೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಭಾರತದ ಎಲ್ಲಾ ರಾಜ್ಯಗಳ ಪ್ರಮುಖ ವಿರೋಧ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು ಇಂಡಿಯಾ ರಕ್ಷಿಸಿ ಅಭಿಯಾನಕ್ಕೆ ಬೆಂಗಳೂರು ಸಾಕ್ಷಿಯಾಯಿತು. ಇಡೀ ‘ಇಂಡಿಯಾ’ಕ್ಕೆ ಕರ್ನಾಟಕ ಆತ್ಮವಿಶ್ವಾಸ ನೀಡಿದೆ ಎಂದರು.

‘ಇಂಡಿಯಾ’ ಸಭೆಯ ನಂತರ ನಮ್ಮ ಪಕ್ಷದ ಎಲ್ಲಾ ರಾಜ್ಯಗಳ ನಾಯಕರನ್ನು ಕರೆದ ಉನ್ನತ ನಾಯಕರುಗಳು ಕರ್ನಾಟಕ ಮಾದರಿಯನ್ನು ಅನುಕರಿಸಿ ಎಂದು ಹೇಳಿದರು. ಕರ್ನಾಟಕ ಮಾದರಿ ಎಂದರೆ ಏನು? ಎಲ್ಲಾ ವೈಮನಸ್ಸು , ವ್ಯಕ್ತಿ ಪ್ರತಿಷ್ಠೆ ಬಿಟ್ಟು, ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ ಎಂದು ದುಡಿಯುವುದೇ ಕರ್ನಾಟಕ ಮಾದರಿ ಎಂದು ಕಿವಿ ಮಾತು ಹೇಳಿದ್ದಾರೆ, ಇದು ನಮ್ಮ ಹೆಗ್ಗಳಿಕೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ 136 ಸ್ಥಾನ ಗೆಲ್ಲುತ್ತದೆ ಎಂದು ಹೇಳಿದ್ದೆ ಸುಮಾರು ಜನ ನಂಬಲಿಲ್ಲ, ವಿರೋಧ ಪಕ್ಷದವರು ಸಮ್ಮಿಶ್ರ ಸರ್ಕಾರ ಬಂದು ಬಿಡುತ್ತದೆ ಎಂದು ಮುಂಚಿತವಾಗಿಯೇ ಕಾಲಿಗೆ ಬಿದ್ದು ಸರ್ಕಾರ ಮಾಡೋಕೆ ತಯಾರಾಗಿದ್ದರು. ಆದರೆ ನನ್ನ ನಂಬಿಕೆ ಸುಳ್ಳಾಗಲಿಲ್ಲ. ಯಾರೋ ನಾಯಕರೊಬ್ಬರುಹೇಳ್ತಾ ಇದ್ದರು ನಾನು ಮಾಟ ಮಂತ್ರ ಮಾಡಿದ್ದೇನೆ ಎಂದು, ಕಾರಣ ಮಾಟಮಂತ್ರವಲ್ಲ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಬೆಳಗಾವಿಯ ಕಾಂಗ್ರೆಸ್ ಬಾವಿ ಬಳಿ ಪ್ರಜಾಧ್ವನಿ ಯಾತ್ರೆ ಪ್ರಾರಂಭ ಮಾಡಿದ್ದೆವು, ಆ ಬಾವಿಯ ನೀರಿನಿಂದ ರಸ್ತೆ ಸ್ವಚ್ಚಗೊಳಿಸಿ ಈ ರಾಜ್ಯಕ್ಕೆ ಅಂಟಿರುವ ದರಿದ್ರ ಕೊಳೆ ಹೋಗಲಿ ಎಂದು ಕೆಲಸ ಪ್ರಾರಂಭ ಮಾಡಿದೆವು ಅದರಂತೆ ಬದಲಾವಣೆ ಆಯಿತು ಎಂದರು.

ಮುಂದೆ ಲೋಕಸಭಾ ಚುನಾವಣೆ ಇದೆ. ನಮ್ಮ ಯೋಜನೆಗಳ ಲಾಭವನ್ನು ಬಿಜೆಪಿ ಮತದಾರರೂ ಪಡೆಯುತ್ತಿದ್ದಾರೆ. ಅಂತಹವರ ಹೃದಯ ಗೆಲ್ಲಬೇಕು, ಕರ್ನಾಟಕದಲ್ಲಿ ದ್ವೇಷ, ಅಸೂಯೆ ರಾಜಕಾರಣಕ್ಕೆ ಅವಕಾಶವಿಲ್ಲ, ಎಲ್ಲರೂ ನಮ್ಮವರೇ, ಆ ನಿಟ್ಟಿನಲ್ಲಿ ಎಲ್ಲಾ ನಾಯಕರು, ಕಾರ್ಯಕರ್ತರು ಕೆಲಸ ಮಾಡಬೇಕು. ನಮ್ಮ ಗುರಿ ಕೇವಲ 2024 ಮಾತ್ರವಲ್ಲ 2028 ಕೂಡ ಇರಬೇಕು ಎಂದು ಕರೆಕೊಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಚಂದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ಅಮರನಾಥ್, ಮಾಜಿ ಸಂಸದ ಉಗ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.