ಚೆನ್ನೈ ( ತಮಿಳುನಾಡು): ಇಲ್ಲಿನ ಚೆಟ್ಪೇಟೆಯಲ್ಲಿರುವ ಬಯೋ ಸಿಎನ್ಜಿ ಘಟಕಕ್ಕೆ ಭೇಟಿ ನೀಡಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಘನ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಸಂಬಂಧ ಮಾಹಿತಿ ಪಡೆದಿದ್ದಾರೆ.
ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಘನ ತ್ಯಾಜ್ಯ ನಿರ್ವಹಣೆಯಲ್ಲಿ 'ಚೆನ್ನೈ ಮಾದರಿ' ಅಧ್ಯಯನ ಮಾಡಲು ನಾನು ನನ್ನ ತಂಡದೊಂದಿಗೆ ಇಲ್ಲಿಗೆ ಬಂದಿದ್ದೇವೆ, ಇಲ್ಲಿನ ತ್ಯಾಜ್ಯ ನಿರ್ವಹಣೆಯಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಂತಾಯಿತು. ಕಳೆದ ಒಂದು ವರ್ಷದಿಂದ ಭೇಟಿ ನೀಡಬೇಕು ಎಂದುಕೊಂಡಿದ್ದೆ. ಈಗ ಸಮಯ ಸಿಕ್ಕ ಕಾರಣಕ್ಕೆ ಭೇಟಿ ನೀಡಿದ್ದೇನೆ. ನಮ್ಮ ರಾಜ್ಯದಲ್ಲೂ ಒಂದಷ್ಟು ಇಲ್ಲಿನ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲಾಗುವುದು” ಎಂದರು.
“ಅನೇಕ ಕಡೆ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಯಶಸ್ಸು ಕಂಡಿಲ್ಲ. ನಮ್ಮಲ್ಲಿಯೂ 10 ಕಡೆ ಕಸದಿಂದ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗಿತ್ತು. ಈ ಹಿಂದೆ ಹೈದರಾಬಾದ್ಗೆ ಭೇಟಿ ನೀಡಿದ್ದೆ. ಇಲ್ಲಿ ನಗರದ ನಡುವೆಯೇ ಸಿಎನ್ ಜಿ ಉತ್ಪಾದನಾ ಘಟಕವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನಮ್ಮಲ್ಲೂ ಒಂದಷ್ಟು ಒಳ್ಳೆ ಕೆಲಸ ಮಾಡಿದ್ದೇವೆ. ಇಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ” ಎಂದರು.
ಇದೇ ವೇಳೆ ಮೇಕೆದಾಟು ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ವರ್ಷ ವರುಣದೇವ ನಮ್ಮನ್ನು ಕಾಪಾಡಿದ್ದಾನೆ. ಮೇಕೆದಾಟು ಯೋಜನೆ ಸಾಕಾರಗೊಂಡರೆ ಕರ್ನಾಟಕಕ್ಕಿಂತ ತಮಿಳುನಾಡಿನ ಜನತೆಗೆ ಹೆಚ್ಚು ಉಪಯೋಗ. ಈಗ ಇದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಮುನ್ನೋಟದ ಭಾಗವಾಗಿ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ಪಡೆಯಲು ಇಂದು Urbaser ಕಂಪನಿ ಕಚೇರಿಗೆ ಭೇಟಿ ನೀಡಲಾಯಿತು. ಮನೆಗಳಿಂದ ಸಂಗ್ರಹಿಸಿದ ಕಸವನ್ನು ಹೇಗೆ ನಿರ್ವಹಣೆ ಮಾಡುತ್ತಾರೆಂಬ ಮಾಹಿತಿ ಪಡೆದುಕೊಳ್ಳಲಾಯಿತು ಎಂದು ಡಿಕೆಶಿ ಹೇಳಿದ್ದಾರೆ.
ಕಾನೂನಾತ್ಮಕವಾಗಿ ನಿವೇಶನ ಹಂಚಿಕೆ: ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಕೆಐಡಿಬಿ ಸಿಎ ನಿವೇಶನ ಹಂಚಿಕೆಯಲ್ಲಾಗಿರುವ ಅಕ್ರಮದ ಬಗ್ಗೆ ಪ್ರಶ್ನಿಸಿದ್ದಾರೆ ಎಂದಾಗ “ಸಿಎ ನಿವೇಶನ ಹಂಚಿಕೆ ಕಾನೂನಾತ್ಮಕವಾಗಿ ನಡೆದಿದೆ. ಇದರಲ್ಲಿ ಯಾವುದೇ ಅಕ್ರಮವಾಗಿಲ್ಲ. ವ್ಯಕ್ತಿಗೆ ಸೈಟು ಹಂಚಿಲ್ಲ, ಚಾರಿಟಬಲ್ ಟ್ರಸ್ಟಿಗೆ ಹಂಚಿದ್ದೇವೆ” ಎಂದರು.
ತಮಿಳುನಾಡು ಸಿಎಂ ವಿದೇಶಪ್ರಯಾಣದಲ್ಲಿದ್ದಾರೆ. ತಮಿಳುನಾಡು ಡಿಸಿಎಂ ಅವರು ಉತ್ತಮ ಸ್ನೇಹಿತರು ಹಾಗೂ ನಮ್ಮ ನಾಯಕರು. ಸಮಯ ಮಾಡಿಕೊಂಡು ಸ್ನೇಹಪೂರ್ವಕವಾಗಿ ಅವರನ್ನು ಭೇಟಿ ಮಾಡಲಾಗುವುದು” ಎಂದು ಹೇಳಿದರು.