ನ್ಯೂಸ್

ಎಚ್ಡಿಕೆ ಮೇಲೆ ವಾಗ್ದಾಳಿ:ಇಷ್ಟು ದಿನ ದಮ್ಮು ತಡಕ್ಕೊಂಡಿದ್ದೆ ಎಂದ ಡಿಕೆ

ಬೆಂಗಳೂರು:
ನಾನು ಮಾತನಾಡಬಾರದೆಂದು ನಮ್ಮ ಸಮಾಜದವರು ಹೇಳಿದ್ರು ಅಂತ ಧಮ್ಮು ತಡ್ಕೊಂಡು ಇದ್ದೆ. ಇನ್ನು ತಡೆಯಕ್ಕಾಗಲ್ಲ. ನಿಮಗೆ ಏನು ಸ್ವಾಭಿಮಾನ ಇದ್ಯೋ ಕುಮಾರಣ್ಣ? ಅದೇ ಸ್ವಾಭಿಮಾನ ನಮಗೂ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಅಧ್ಯಕ್ಷನಾಗಿ ಮಾತನಾಡಬೇಕು ಬರ್ತೀನಿ. ನೀವು ಚರ್ಚೆಗೆ ಬರಲು ಸಿದ್ಧರೆ? ಎಂದು ಸವಾಲು ಹಾಕಿದರು.
ನಾಡಿನ ಮುಖ್ಯಮಂತ್ರಿಗಳಿಗೆ ಮೀರ್ ಸಾಧಿಕ್ ಎಂದು ಕರೆದಿದ್ದಾರೆ. ಕುಮಾರಸ್ವಾಮಿಗೆ ನಮ್ರತೆಯಿಂದ ಡಾಕ್ಟರೇಟ್ ತೆಗೆದುಕೊಂಡಿರಬೇಕು ಎಂದು ಗೇಲಿ ಮಾಡಿದರು.
ವಿಧಾನಸಭೆಯಲ್ಲಿ ತಮ್ಮ ನುಡಿಮುತ್ತುಗಳನ್ನ ಮಾತನಾಡಿದ್ದೀರಿ. ಸಿದ್ದರಾಮಯ್ಯ, ಡಿಕೆಶಿ ಸೇರಿ ಮೈತ್ರಿ ಸರ್ಕಾರ ತೆಗೆದ್ರಿ ಅಂತ ಹೇಳಿದ್ದೀರಿ. ಸ್ವಲ್ಪ ದಿನ ನನ್ನ ಮೇಲೆ, ಇನ್ನು ಸ್ವಲ್ಪ ದಿನ ಸಿಎಂ ಮೇಲೆ ಆಪಾದನೆ ಮಾಡಿದ್ದೀರಿ. ಆದರೆ ವಿಧಾನಸಭೆಯಲ್ಲಿಯೇ ಬಿಎಸ್‌ವೈ ಹಣ ಆಮಿಷ ನೀಡಿ ಸರ್ಕಾರ ತೆಗೆದ್ರು ಎಂದು ಹೇಳಿರುವ ಸಾಕ್ಷಿ ಗುಡ್ಡೆ ಇದೆಯಲ್ಲವೇ? ಎಂದು ಕೇಳಿದರು.
ಯೋಗಕ್ಕಿಂತ ಯೋಗಕ್ಷೇಮ ಮುಖ್ಯ ಅಂತ ನಾನು ಆಗಾಗ್ಗೆ ಹೇಳ್ತೀನಿ. ನಾವು ಸಹಕಾರ ಕೊಟ್ಟಿದ್ದೀವಿ. ಸರ್ಕಾರ ತೆಗೆಯಲು ಬೆಳಗಾಂನವನೊಬ್ಬ, ಚನ್ನಪಟ್ಟಣದವನೊಬ್ಬ ಮುಂಚೂಣಿಯಲ್ಲಿದ್ದರು. ಆಗ ಸರ್ಕಾರವನ್ನ ಉಳಿಸಿಕೊಳ್ಳಲಾಗದೆ, ಈಗ ಯಾರು ಸರ್ಕಾರವನ್ನ ತೆಗೆದ್ರೋ ಅವರ ಜೊತೆ ತಬ್ಬಾಡುತ್ತಿದ್ದೀರಲ್ಲ, ಯಾರು ನಿಮಗೆ ಬೆನ್ನಿಗೆ ಚೂರಿ ಹಾಕಿದ್ರು ಅವರ ಜೊತೆನೇ ಇದ್ದೀರಲ್ಲ? ನಿಮ್ಮ ರಾಜಕಾರಣದ ಮೌಲ್ಯ ಏನಾಯ್ತು? ಎಂದು ಪ್ರಶ್ನಿಸಿದರು.
ಹೊರಗೆ ಮಾತನಾಡಿದರೆ ಟೀಕೆಗಳು ಸಾಯುತ್ತವೆ. ಸದನದಲ್ಲೇ ಉತ್ತರ ಕೊಡ್ತೀನಿ, ಅಲ್ಲೇ ಮಾತನಾಡ್ತಿನಿ. ನೀವು ಟ್ವಿಟ್ ಆದ್ರೂ ಮಾಡ್ಕೊಳ್ಳಿ, ಏನಾರ ಮಾಡಿಕೊಳ್ಳಿ. ನೀವಂತು ಡಿಬೆಟ್‌ಗೆ ಬರಲ್ಲಂತ ಗೊತ್ತಿದೆ ಎಂದರು.

ಗ್ರಾಮಾಂತರ ಹೆಸರಿಟ್ಟಿದ್ದೇಕೆ?
ಬೆಂಗಳೂರು ಗ್ರಾಮಾಂತರ ಎಂದು ಯಾಕೆ ಹೆಸರಿಟ್ರು? ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಮನಗರ, ಅನೇಕಲ್, ಕನಕಪುರ ಬೆಂಗಳೂರು ಗ್ರಾಮಾಂತರಕ್ಕೆ ಸೇರಿದ್ದು.
ಬೆಂಗಳೂರು ಕಟ್ಟಿದ್ದು ಕೆಂಪೇಗೌಡರು. ಆ ಹೆಸರು ಉಳಿಸಿಕೊಳ್ಳೋಕೆ ನೋಡ್ತಿದ್ದೇವೆ. ನಾನು ನಮ್ಮ ಜನರಿಗೆ ತಿಳಿ ಹೇಳಬಾರದೇ? ಎಂದು ಕೇಳಿದರು.
ನನ್ನ ಆಸ್ತಿ ವಿದ್ಯಾಕ್ಷೇತ್ರಕ್ಕೆ ಎಷ್ಟು ದಾನಮಾಡಿದ್ದೇನೆ ಗೊತ್ತಿದಿಯಾ? ಅದರ ಬಗ್ಗೆ ನಿಮಗೇನಾದ್ರೂ ಅರಿವಿದೆಯಾ? ನೀವು ರಾಮನಗರ ಜಿಲ್ಲೆ ಮಾಡಿದಾಗ ಶುಭ ಹಾರೈಸಿದ್ದೀನಿ. ಎಲ್ಲವೂ ಅಸೆಂಬ್ಲಿಯಲ್ಲಿ ಡಿಬೇಟ್ ಆಗಲಿ, ಇಲ್ಲಿ ಬೇಡ. ನಿಮ್ಮದು ಏನಿದು ಎಲ್ಲ ಅಲ್ಲಿಗೆ ತನ್ನಿ. ಡಿಬೇಟ್ ಮಾಡೋಣ ಎಂದರು.
ಗೆಜೆಟ್ ತೆಗೆದು ತೋರಿಸಲಾ?
ನಾನು ರಾಮನಗರ ಜಿಲ್ಲೆ ಪ್ರತಿನಿಧಿಸುತ್ತಿದ್ದೇನೆ. ಜನ ನನ್ನನ್ನ ಆಶೀರ್ವದಿಸಿದ್ದಾರೆ. ಜನರ ಒಳಿತಿಗೆ ನಾವು ಏನಾದರೂ, ಮಾಡಬೇಕಲ್ವಾ? ನಮ್ಮದು ಬೆಂಗಳೂರು ಅಲ್ವಾ? ಗೆಜೆಟ್‌ನಲ್ಲಿ ಕನಕಪುರ ಎಲ್ಲಿದೆ ಅಂತ ಇತಿಹಾಸದ ಗೆಜೆಟ್ ತೆಗೆದು ತೋರಿಸಲಾ? ಎಂದು ಕೇಳಿದರು.
ನಾನು ಕನಕಪುರ ಬೆಂಗಳೂರಿಗೆ ಸೇರಿಸ್ತೇನೆ ಅಂದಿಲ್ಲ. ರಾಮನಗರ, ಚನ್ನಪಟ್ಟಣ, ಕನಕಪುರ ಬೆಂಗಳೂರಿಗರು ಎಂದಿದ್ದೇನೆ ಎಂದೂ ಹೇಳಿದರು.
ಕುಮಾರಸ್ವಾಮಿಯವರೇ ನಾನು ನಿಮಗೆ ಹೇಳಲಿಲ್ಲ. ನಮ್ಮ ಜನರಿಗೆ ಹೇಳಿದ್ದು. ಅದು ಏನಾದ್ರೂ ತಪ್ಪಾಗಿದ್ಯಾ? ರಾಮನಗರಕ್ಕೆ ಡಿಕೆಶಿ ಕೊಡುಗೆಯೇನು ಎಂದು ಕೇಳಿದ್ದೀರಿ. ನನ್ನ ಕೊಡುಗೆ ಇರಲಿ. ನಿಮ್ಮ ಕೊಡುಗೇಯೇನು ಹೇಳಿ? ಜನ ನಿಮ್ಮನ್ನ ಗೆಲ್ಲಿಸಿದ್ರಲ್ವಾ? ಏನು ಮಾಡಿದ್ದೀರಿ ಎಂದರು.
ರಾಮನಗರ ಛಿದ್ರ ಮಾಡೋಕೆ ಅವರು ಹೊರಟಿರಬೇಕು. ನಾನು ಬೆಂಗಳೂರಿಗೆ ಸ್ವರೂಪ ಕೊಡಲು ಹೊರಟವನು. ಕೆಂಪೇಗೌಡರು ಎಲ್ಲೆಲ್ಲಿ ಬೌಂಡರಿ ಹಾಕಿದ್ದಾರೋ? ಆ ಬೌಂಡರಿ ಬಗ್ಗೆ ನಾನು ಮಾತನಾಡಿದ್ದು ಎಂದರು.

ಎಷ್ಟು ಮೌಲ್ಯ ಮಾಡಿದ್ರಿ?
ಬೆಂಗಳೂರನ್ನ ಇಡೀ ವಿಶ್ವವೇ ನೋಡ್ತಿದೆ. ಆಸ್ತಿ ಮಾರಿಕೊಳ್ಳಬೇಡಿ ಎಂದು ಜನರಿಗೆ ಹೇಳಿದ್ದೆ.
ರಾಮನಗರದಲ್ಲಿ ನೀವು ಎಷ್ಟು ಜಮೀನು ತೆಗೆದುಕೊಂಡ್ರಿ? ಅಲ್ಲಿ ಎಷ್ಟು ಮೌಲ್ಯ ಮಾಡಿದ್ರಿ ಹೇಳಿ? ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಬಂಗಾರಪ್ಪ ಅವರು 90 ಸಾವಿರಕ್ಕೆ ಸೈಟ್ ಕೊಟ್ಟಿದ್ರು. ಇವತ್ತು ಅದರ ವ್ಯಾಲ್ಯೂ 6 ಕೋಟಿ ಆಗಿದೆ. ಇದು ನಿಮಗೆ ಗೊತ್ತಿಲ್ಲವೇ? ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಟಿ.ಬಿ.ಜಯಚಂದ್ರ, ಎಂ.ಸಿ.ಸುಧಾಕರ್, ಮಧು ಬಂಗಾರಪ್ಪ, ಸಲೀಂ ಅಹ್ಮದ್, ಎಂ.ಚಂದ್ರಪ್ಪ ಹಾಜರಿದ್ದರು.