ಕನಕಪುರ : ತಾಲೂಕಿನಾದ್ಯಂತ ಶಾಸಕ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರು ಮತ ಬ್ಯಾಂಕ್ ಗಟ್ಟಿಗೊಳಿಸಲು ಕೇಂದ್ರ ಸರ್ಕಾರದ ಲಸಿಕೆ ಅಭಿಯಾನವನ್ನು ತಮ್ಮದೇ ಎಂಬಂತೆ ಬಿಂಬಿಸಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.
ಕಾರ್ಮಿಕ ಇಲಾಖೆಯಿಂದ ಕೊಡುವ ಲಸಿಕೆ ಅಭಿಯಾನವನ್ನು ಟಿ.ಗೊಲ್ಲಹಳ್ಳಿ, ತೆರಿಗೆದೊಡ್ಡಿ, ಸಾತನೂರು ಹೋಬಳಿ, ಅರೆಕಟ್ಟೆದೊಡ್ಡಿ ಗ್ರಾಮಗಳಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯನ್ನು ಪಕ್ಷದ ಬ್ಯಾನರ್‌ನಡಿ ಮಾಡಿ ಹಳ್ಳಿಯ ಮುಗ್ಧ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ತಾಲೂಕಿನ ವಿವಿಧೆಡೆ ಕೇಂದ್ರ ಸರ್ಕಾರದ ಲಸಿಕೆ ಅಭಿಯಾನದ ಬ್ಯಾನರ್‌ಗಳಲ್ಲಿ ಡಿ.ಕೆ. ಸೋದರರ ಭಾವಚಿತ್ರ ಇರುವ ೆಟೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಲಿಖಿತ ದೂರು: ಅರೆಕಟ್ಟೆದೊಡ್ಡಿ, ಐ.ಗೊಲ್ಲಹಳ್ಳಿ ಮತ್ತು ಅರೆಕೊಪ್ಪ ಗ್ರಾಮಗಳಲ್ಲಿ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಲಸಿಕೆ ಅಭಿಯಾನದಡಿ ಯುವ ಕಾಂಗ್ರೆಸ್ ಸಮಿತಿ ಸಹಯೋಗ ಎಂದು ಬ್ಯಾನರ್‌ನಲ್ಲಿ ಪಕ್ಷದ ಚಿಹ್ನೆ ಹಾಗೂ ಶಿವಕುಮಾರ್ ಮತ್ತು ಸುರೇಶ್ ಅವರ ಭಾವಚಿತ್ರ ಬಳಸಲಾಗಿದೆ.
ಅದೇ ರೀತಿ ಸುವರ್ಣ ಕರ್ನಾಟಕ ರಾಜ್ಯ ಅಸಂಘಟಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಹೆಸರಿನಲ್ಲಿ ಕಾರ್ಮಿಕರಿಗೆ ಕೊಡಬೇಕಾದ ಲಸಿಕೆಯನ್ನು ಯಾವುದೇ ಅಸಂಘಟಿತ ಕಾರ್ಮಿಕರಿಗೆ ನೀಡದೆ ಪಕ್ಷದ ಕಾರ್ಯಕರ್ತರು, ಮುಖಂಡರು ತಮಗೆ ಬೇಕಾದವರನ್ನು ಕರೆತಂದು ಕೊಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ಬಿಜೆಪಿ ಕಾರ್ಯಕರ್ತರು ಲಿಖಿತವಾಗಿ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಶಿಷ್ಟಾಚಾರ ಉಲ್ಲಂಘನೆ ಆರೋಪ : ಕೊಟ್ಟಗಾಳು ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಬಡವರಿಗೆ ನೀಡುವ ಆಹಾರ ಕಿಟ್ ವಿತರಣೆಯನ್ನು ಸಂಸದರು ಬಂದು ಉದ್ಘಾಟನೆ ಮಾಡುತ್ತಿರುವುದು ಖಂಡನೀಯ ಎಂದು ಕೊಟ್ಟಗಾಳು ಗ್ರಾಪಂ ಸದಸ್ಯ ವಕೀಲ ದೇವುರಾವ್ ಜಾಧವ್ ಆರೋಪಿಸಿದ್ದಾರೆ.
ಮಂಗಳವಾರ ಕೊಟ್ಟಗಾಳು ಗ್ರಾಮದಲ್ಲಿ ಆಹಾರ ಕಿಟ್ ವಿತರಣೆ ಪಂಚಾಯಿತಿ ಅನುದಾನವೋ ಅಥವಾ ಅವರ ಸ್ವಂತ ಅನುದಾನವೋ ಎಂಬುದನ್ನು ಸ್ಪಷ್ಟಪಡಿಸದೇ ಹಂಚಿಕೆ ಮಾಡಿಹೋಗಿದ್ದಾರೆ. ಕೊಟ್ಟಗಾಳು ಗ್ರಾಪಂ, ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುವ ರಾಮನಗರ ಕ್ಷೇತ್ರಕ್ಕೆ ಒಳಪಟ್ಟಿರುತ್ತದೆ. ಜತೆಗೆ ಸ್ವತಃ ನಾನೇ ಇಲ್ಲಿ ಗ್ರಾಪಂ ಸದಸ್ಯನಾಗಿದ್ದರೂ ನನ್ನ ಗಮನಕ್ಕೆ ತಾರದೆ ಶಿಷ್ಟಾಚಾರ ಉಲ್ಲಂಸಿರುವುದು ಸರಿಯಲ್ಲ. ಈ ಸಂಬಂಧ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಗಮನಕ್ಕೆ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸತ್ಯ ಹರಿಶ್ಚಂದ್ರರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಡಿ.ಕೆ. ಸಹೋದರರು ಸರ್ಕಾರದ ಯೋಜನೆಯನ್ನು ಮನೆಯ ಆಸ್ತಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಇವರ ವಿರುದ್ಧ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ನಾಗಾನಂದ ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ