ನ್ಯೂಸ್

ನಾನು ರಾಜ್ಯಕ್ಕೆ ಭೇಟಿ ನೀಡುವುದು ಡಿಕೆ ಶಿವಕುಮಾರ್‌ ಸಹಿಸುತ್ತಿಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ

ನವದೆಹಲಿ: ನೀರಿನ ವಿಷಯದಲ್ಲಿಯೂ ರಾಜ್ಯ ಕಾಂಗ್ರೆಸ್‌ ಸರ್ಕಾರ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ನಾವೆಂದೂ ಚಿಲ್ಲರೆ ರಾಜಕಾರಣ ಮಾಡಿಲ್ಲ. ಅತ್ಯಂತ ಕೆಟ್ಟ ರೀತಿಯಲ್ಲಿ ಕೇಂದ್ರದ ಸಚಿವರನ್ನು ನಡೆಸಿಕೊಳ್ಳುವುದು, ಲಘುವಾಗಿ ಮಾತನಾಡುವುದು ಶೋಭೆಯಲ್ಲ ಎಂದು ಕೇಂದ್ರ ಸಚಿವ ಎಚ್​.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತ್ಯಂತ ಕೆಟ್ಟ ರೀತಿಯಲ್ಲಿ ಕೇಂದ್ರದ ಸಚಿವರನ್ನು ನಡೆಸಿಕೊಳ್ಳುವುದು, ಲಘುವಾಗಿ ಮಾತನಾಡುವುದು ಶೋಭೆಯಲ್ಲ. ಇಂಥ ನಡವಳಿಕೆಯನ್ನು ಪ್ರತಿದಿನವೂ ನಾನು ಕಾಣುತ್ತಿದ್ದೇನೆ. ಮೊದಲು ಇಂಥ ರಾಜಕಾರಣವನ್ನು ನಿಲ್ಲಿಸಿ. ರಾಜ್ಯದ ಅಭಿವೃದ್ಧಿಗೆ ಪೂರಕವಾದ ನಡವಳಿಕೆ ಅಳವಡಿಸಿಕೊಳ್ಳಿ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.

ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಸೈನಿಕರಿಗೆ ಅಪಮಾನ ಮಾಡಿದ್ದಾರೆ: ನಾನು ರಾಜ್ಯಕ್ಕೆ ಭೇಟಿ ನೀಡುವುದನ್ನು ಶಿವಕುಮಾರ್‌ ಸಹಿಸುತ್ತಿಲ್ಲ. ನಾನು ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡಕ್ಕೆ ಭೇಟಿ ನೀಡಿದಾಗ, "ಈ ಮನುಷ್ಯ ಏತಕ್ಕೆ ಬಂದಿದ್ದಾರೆ. ಮಿಲಿಟರಿಯನ್ನು ಕರೆದುಕೊಂಡು ಬರಬೇಕಿತ್ತು. ಒಬ್ಬರೇ ಬಂದು ಏನು ಮಾಡುತ್ತಾರೆ?” ಎಂದೆಲ್ಲಾ ಲಘುವಾಗಿ ಹೇಳಿಕೆ ನೀಡಿದ್ದರು. ಕೇಂದ್ರ ಸರ್ಕಾರ ನಿರ್ದೇಶನ ಹಾಗೂ ರಾಜ್ಯ ಸರ್ಕಾರದ ಅಪೇಕ್ಷೆಯಂತೆ ನಲವತ್ತಕ್ಕೂ ಹೆಚ್ಚು ಯೋಧರು ಬೆಳಗಾವಿಯಿಂದ ತೆರಳಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತ್ತೆ ಸೋಮವಾರದಂದು ಶಿವಕುಮಾರ್‌ ಅವರು ಹೇಳಿಕೆ ನೀಡಿ, ʼನಾನು ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ. ನನ್ನ ಹೆಸರೇಳದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣ ಆಗಲ್ಲʼ ಎಂದಿದ್ದಾರೆ. ಅವರ ಬಗ್ಗೆ ಮಾತನಾಡಿದ್ದು ಯಾರು? ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅವರ ಹೇಳಿಕೆಗಳನ್ನು ಗಮನಿಸಿದರೆ ಅವರೊಬ್ಬ ಗೊಂದಲದ ವ್ಯಕ್ತಿ ಎನ್ನುವುದು ತಿಳಿಯುತ್ತದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಗಳಲ್ಲಿ ತಾಳಮೇಳವಿಲ್ಲ, ಸ್ಥಿರತೆ ಇಲ್ಲ. ಅವರೊಬ್ಬ ಗೊಂದಲಮಯ ವ್ಯಕ್ತಿತ್ವದ ವ್ಯಕ್ತಿ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದರು.

ಕಾವೇರಿ ಆರತಿಗೆ ಸ್ವಾಗತ: ಗಂಗಾ ಆರತಿ ಮಾದರಿಯಲ್ಲಿಯೇ ಕಾವೇರಿ ಆರತಿ ನೆರೆವೇರಿಸಲಾಗುವುದು ಎಂದು ಡಿಸಿಎಂ ಡಿಕೆಶಿ ಹೇಳಿರುವುದನ್ನು ಸ್ವಾಗತಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಒಳ್ಳೆಯದೇ. ಬೇಡ ಎಂದವರು ಯಾರು? ಗಂಗಾ ಆರತಿ ಎನ್ನುವುದು ಒಂದು ಪವಿತ್ರವಾದ ಕಾರ್ಯಕ್ರಮ. ಆ ಕಾರ್ಯಕ್ರಮವನ್ನು ಅಳವಳಡಿಸಿಕೊಂಡರಷ್ಟೇ ಸಾಲದು, ಪ್ರತೀ ಕುಟುಂಬಕ್ಕೆ ಬೆಳಕು ನೀಡುವ ರೀತಿಯಲ್ಲಿ ಗಂಗಾ ಆರತಿ ಮಾಡುವುದು ಸೂಕ್ತ. ಅದಕ್ಕೆ ನನ್ನ ಬೆಂಬಲವೂ ಇದೆ. ಇಲ್ಲಿ ಗಂಗಾ ಆರತಿ ಅಂತ ಹೇಳಿ, ಇನ್ನೊಂದೆಡೆ ಭಯಭಕ್ತಿ ಇಲ್ಲದೆ ಜನಗಳ ಜತೆ ಚಲ್ಲಾಟ ಆಡುವುದು ಬೇಡ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಮ್ಮನ್ನು ಕರೆಸಿ ಮಾತನಾಡುವುದು ಏನಿದೆ?: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಸರ್ಕಾರಕ್ಕೆ ದೊಡ್ಡ ಮಟ್ಟದ ಮುಜುಗರ ತಪ್ಪಿದಂತಾಗಿದೆ. ಈಗ ಅವರು ತಾಯಿ ಚಾಮುಂಡೇಶ್ವರಿಯನ್ನು ನೆನಪು ಮಾಡಿಕೊಂಡಿದ್ದಾರೆ. ಸರ್ವಪಕ್ಷ ಸಭೆಗೆ ನಾನು ಹೋಗಲಿಲ್ಲ ಎಂದು ಟೀಕೆ ಮಾಡಿದ್ದರು. ನಮ್ಮನ್ನು ಸರ್ವಪಕ್ಷ ಸಭೆಗೆ ಕರೆಯುವುದಕ್ಕೆ ಮೊದಲೇ ನೆರೆ ರಾಜ್ಯಕ್ಕೆ ನೀರು ಹರಿಸಿ ಆಗಿತ್ತು. ನೀರು ಬಿಟ್ಟಾದ ಮೇಲೆ ಅವರು ನಮ್ಮನ್ನು ಕರೆಸಿ ಮಾತನಾಡುವುದು ಏನಿದೆ? ಇದನ್ನು ಪ್ರಶ್ನೆ ಮಾಡಿದರೆ ರಾಜಕೀಯ ಎನ್ನುತ್ತಾರೆ. ಇವರು ಇನ್ನೂ ನಾಲ್ಕು ದಿನ ಸರ್ವಪಕ್ಷ ಸಭೆ ಕರೆಯುವ ಅಗತ್ಯವೇ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.