ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಕರ್ನಾಟಕ ರಾಜ್ಯದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಬಂಡವಾಳ ಹೂಡಿಕೆ ವಿಚಾರದಲ್ಲಿ ಕರ್ನಾಟಕ ದೇಶದ ಇತರ ನಗರಗಳ ಜತೆ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ (DK Shivakumar) ಅಭಿಪ್ರಾಯಪಟ್ಟಿದ್ದಾರೆ.
ಇನ್ವೆಸ್ಟ್ ಕರ್ನಾಟಕ ಜಾಗತಿಕ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಡಿಸಿಎಂ ಡಿಕೆ. ಶಿವಕುಮಾರ್ (DK Shivakumar), ಳೆದ ನಾಲ್ಕು ದಿನಗಳಲ್ಲಿ ಈ ಸಮಾವೇಶದಲ್ಲಿ ಅನೇಕ ಒಪ್ಪಂದಗಳು, ಚರ್ಚೆಗಳು ನಡೆದಿವೆ. ನೀವೆಲ್ಲರೂ ಕರ್ನಾಟಕ ರಾಜ್ಯದಲ್ಲಿ ಸೋಲುವ ಮಾತಿಲ್ಲ. ಹೀಗಾಗಿ ಈ ರಾಜ್ಯದ ಮೇಲೆ ನೀವು ವಿಶ್ವಾಸವಿಡಬಹುದು. ಈ ರಾಜ್ಯಕ್ಕೆ ಬಂದವರು ಬರಿಗೈಯಲ್ಲಿ ಹೋಗುವುದಿಲ್ಲ. ಈ ಸಮಾವೇಶದಲ್ಲಿ ಭಾಗವಹಿಸಿದ ಸಜ್ಜನ್ ಜಿಂದಾಲ್, ಆನಂದ್ ಮಹೀಂದ್ರಾ ಅವರ ಮಾತು ಕೇಳಿದ್ದೀರಿ. ಅವರ ಯೋಶೋಗಾಥೆ ಕೇಳಿದ್ದೀರಿ. ಇವರ ಮಾತು ಕೇಳಿದ ನಂತರ ವಿಶ್ವ ಭಾರತವನ್ನು ಬೆಂಗಳೂರು ಹಾಗೂ ಕರ್ನಾಟಕದ ಮೂಲಕ ನೋಡುತ್ತಿದೆ.
ನಿಮ್ಮ, ಕರ್ನಾಟಕ ರಾಜ್ಯ ಹಾಗೂ ದೇಶದ ಭವಿಷ್ಯಕ್ಕಾಗಿ ನೀವು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು. ಇದು ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿ ಮಾತ್ರವಲ್ಲ ಬೆಂಗಳೂರಿನ ಹೊರತಾಗಿ ಪ್ರಗತಿ ಸಾಧಿಸಲು ನಾವು ಗುರಿ ಹೊಂದಿದ್ದೇವೆ. ನಮ್ಮ ರಾಜ್ಯದಲ್ಲಿ ಏರೋಸ್ಪೇಸ್ ಕ್ಷೇತ್ರದಲ್ಲಿ ನಮ್ಮ ಎಂಎಸ್ಎಂಇಗಳು ದೊಡ್ಡ ಶಕ್ತಿ ತುಬುತ್ತಿವೆ. ಬಾಹ್ಯಾಕಾಶ ಕ್ಷೇತ್ರದ ಸಾಧನೆಗೆ ರಾಕೆಟ್ ಗಳನ್ನು ನಮ್ಮ ಪೀಣ್ಯ ಕೈಗಾರಿಕಾ ಪ್ರದೇಶದಲ್ಲೇ ತಯಾರು ಮಾಡಿದ್ದೆವು.
ನೆಹರೂ ಅವರ ಕಾಲದಿಂದ ದೊಡ್ಡ ಕೈಗಾರಿಕೆಗಳು ಆರಂಭವಾಗಿ ದೊಡ್ಡ ಮಟ್ಟಕ್ಕೆ ಬೆಳೆದಿವೆ. ದೇಶದ ದೊಡ್ಡ ಕಂಪನಿಗಳು ನಮ್ಮ ರಾಜ್ಯದ ನೀತಿಗಳು, ಸ್ನೇಹ ಸಂಬಂಧವನ್ನು ಮೆಚ್ಚಿ ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ನಾವೆಲ್ಲರೂ ಒಟ್ಟಾಗಿ ಸೇರಿ ಭವಿಷ್ಯದತ್ತ ಹೆಜ್ಜೆ ಹಾಕೋಣ. ಈ ಸಮಾವೇಶದ ಮೂಲಕ ರಾಜ್ಯಕ್ಕೆ 10 ಲಕ್ಷ ಕೋಟಿ ಗುರಿ ಹೊಂದಿದೆ. ನಮ್ಮ ನೂತನ ಕೈಗಾರಿಕಾ ನೀತಿಯು ಬೆಂಗಳೂರಿನ ಹೊರತಾಗಿ ರಾಜ್ಯದ ಇತರ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ.
ಈ ದೇಶದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆರಂಭಿಸಿದ್ದೆ ಎಸ್.ಎಂ ಕೃಷ್ಣ ಅವರ ಸರ್ಕಾರ ಕರ್ನಾಟಕದಲ್ಲಿ. ಈ ಸಮಾವೇಶ ಕೇವಲ ಆರಂಭವಷ್ಟೇ, ಇಲ್ಲಿಂದ ನಿಮಗೆ ಅವಕಾಶಗಳು ತೆರೆದುಕೊಳ್ಳಲು ಆರಂಭವಾಗುತ್ತವೆ. ವರ್ಷದ 365 ದಿನಗಳು ಕೂಡ ನಿಮಗಾಗಿ ನಾವು ಬಾಗಿಲು ತೆರೆದಿರುತ್ತೇವೆ. ನೀವು ಯಾವಾಗ ಬಂದರೂ ನಾವು ನಿಮಗೆ ಅಗತ್ಯ ನೆರವು ನೀಡಿ ನಿಮ್ಮ ಪ್ರಗತಿ, ಕರ್ನಾಟಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ. ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ ಈ ಸಮಾವೇಶ ಯಶಸ್ವಿಯಾಗಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಸಿಎಂ ಡಿಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.