ನ್ಯೂಸ್

ಸರ್ಕಾರ ಇಲ್ಲದಿದ್ದಾಗಲೇ ನನಗೆ ಮಾಹಿತಿ‌ ಸಿಗುತ್ತಿತ್ತು, ಇನ್ನು ಈಗ ಸಿಗಲ್ವಾ?: ಡಿ.ಕೆ. ಶಿವಕುಮಾರ್

ಮೋಹನ್​ ಶೆಟ್ಟಿ

ಬೆಂಗಳೂರು: ಕಾಂಗ್ರೆಸ್​ ಸರ್ಕಾರ ಬೀಳಿಸುವ ಪಿತೂರಿ ಕುರಿತು ಇಂದು ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರ ಇಲ್ಲದಿದ್ದಾಗಲೇ ನನಗೆ ಮಾಹಿತಿ‌ ಸಿಗುತ್ತಿತ್ತು, ಇನ್ನು ನಮ್ಮದೇ ಸರ್ಕಾರ ಇರುವಾಗ ಸಿಗಲ್ವಾ ಎಂದು ಹೇಳಿದ್ದಾರೆ.

"ಕೆಲವರು ಶಾಸಕರಿಗೆ ಗಾಳ ಹಾಕುತ್ತಿರುತ್ತಾರೆ. ತೊಂದರೆ ಮಾಡಬೇಕು ಎಂದೇ ಕಾಯುತ್ತಿರುತ್ತಾರೆ. ಅವರ ಕೈಯಲ್ಲಿ ಆಗಲ್ಲ ಅಂತ ಗೊತ್ತಿರುತ್ತದೆ. ಆದ್ರೆ, ಸದಾ ಸುದ್ದಿಯಲ್ಲಿರಬೇಕು ಎಂಬ ಆಸೆಯಿಂದ ಈ ರೀತಿ ಮಾಡುತ್ತಾರೆ. ನಾನು ಎಲ್ಲವನ್ನೂ ಗಮನಿಸುತ್ತಿರುತ್ತೇನೆ, ಪಕ್ಷದ ಅಧ್ಯಕ್ಷನಾಗಿ ಸುಮ್ಮನೆ ಕೂರುವುದಿಲ್ಲ" ಎಂದು ಹೇಳಿದರು.

"ಯಾರು ಎಲ್ಲಿ ಮಾತನಾಡಿದರು, ಎಲ್ಲಿ ಕರೆದರು ಎಲ್ಲವೂ ತಿಳಿಯುತ್ತದೆ ನನಗೆ. ಸರ್ಕಾರ ಇಲ್ಲದ ಸಂದರ್ಭದಲ್ಲೇ ಎಲ್ಲಾ ಮಾಹಿತಿ‌ ಸಿಗುತ್ತಿತ್ತು.  ಈಗ ನಮ್ಮದೇ ಸರ್ಕಾರ ಇದ್ದಾಗ ಸಿಗಲ್ವಾ, ವೈಯಕ್ತಿಕ ಮಾಹಿತಿ ಕೂಡ ಲಭ್ಯವಾಗುತ್ತದೆ" ಎಂದು ಹೇಳಿದರು.