ನ್ಯೂಸ್

ಡಿ ಕೆ ಶಿವಕುಮಾರ್ ಸಿಎಂ ಆಗಬೇಕು : ಸಿಪಿವೈ

ಗಂಗಾಧರ ಬಿ ವಿ

ಚನ್ನಪಟ್ಟಣ

ಡಿ ಕೆ ಶಿವಕುಮಾರ್ ಸಿಎಂ ಆಗಬೇಕು. ಅದು ಜಿಲ್ಲೆಯ ಜನ ಹಾಗೂ ಎಲ್ಲ ಶಾಸಕರ ಅಭಿಪ್ರಾಯವಾಗಿದೆ. ಮುಂದೆ ಅದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಮತ್ತೊಮ್ಮೆ ‌ಪುನರುಚ್ಚಿಸಿದರು.

ತಾಲೂಕಿನ ಕಾಲಿಕೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗಬೇಕು ಎಂಬ ಆಶಯ ನಮ್ಮ ಜಿಲ್ಲೆಯಲ್ಲಿದೆ. ವೈಯುಕ್ತಿಕವಾಗಿ ನಾನು ಸಹ ಅದನ್ನೇ ಬಯಸುತ್ತೇನೆ. ಆದರೆ, ಪಕ್ಷ ತೀರ್ಮಾನ ಏನು ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಡಿಕೆಶಿವಕುಮಾರ್ ಸಿಎಂ ಆಗುವುದು ನಮಗೂ ಸಹ ಸಂತೋಷದ ವಿಚಾರ ಎಂದರು‌

ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಅಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಯೋಗೇಶ್ವರ್, ನನಗೆ ಸಚಿವ ಸ್ಥಾನ ಬೇಡ, ಶಿವಕುಮಾರ್ ಸಿಎಂ ಆದರೆ ಸಾಕು. ಅಧಿಕಾರದ ಒಡಂಬಡಿಕೆ ವಿಚಾರ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕನಾಗಿ 6 ತಿಂಗಳಾಗಿದೆ. ಕಾಂಗ್ರೆಸ್ ನಲ್ಲಿ ನಾನು ಬಹಳ ಸಕ್ರಿಯವಾಗಿ ಓಡಾಡುತ್ತಿಲ್ಲ. ತಾಲೂಕಿನ ಕೆಲಸ ಮಾಡಿಕೊಂಡು ಇದ್ದೇನೆ. ನನಗೆ ಮಂತ್ರಿಸ್ಥಾನದ ಆಸಕ್ತಿ ಇಲ್ಲ, ನನಗೆ ಬೇಡಣ್ಣ. ಮೊದಲು ಶಿವಕುಮಾರ್ ಗೆ ಸಿಎಂ ಸ್ಥಾನ ಸಿಗಲಿ, ನಾನು ಸಪೋರ್ಟ್ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು‌.

ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವ ವಿಚಾರ ಹಾಗೂ ಎಐಸಿಸಿ ಒಬಿಸಿ ಮಂಡಳಿಯ ಸದಸ್ಯರಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಕಾಂಗ್ರೆಸ್ ಬೆಳವಣಿಗೆ ಬಗ್ಗೆ ನಾನು ಸೀರಿಯಸ್ ಆಗಿ ಫಾಲೋ ಮಾಡುತ್ತಿಲ್ಲ. ಯಾರು ಏನು ಆಗುತ್ತಿದ್ದಾರೆ, ಏನು ಆಗುತ್ತಿದೆ ಎಂಬ ಮಾಹಿತಿ ಇಲ್ಲ. ಸದ್ಯಕ್ಕೆ ನಾನು ಆಕ್ಟೀವ್ ಇಲ್ಲ. ನನಗೆ ಸಚಿವ ಸ್ಥಾನ ಬೇಡ, ಜಿಲ್ಲೆಯಲ್ಲಿ ಶಾಸಕ ಎಚ್ ಸಿ ಬಾಲಕೃಷ್ಣ ಇದ್ದಾರೆ, ಅವರು ಕೂಡ ಆಕಾಂಕ್ಷಿಯಾಗಿದ್ದಾರೆ. ಶಿವಕುಮಾರ್ ಸಿಎಂ ಆದರೆ ಸಾಕು ಎಂದರು.