ನ್ಯೂಸ್

ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ತಡೆಯಲು ಸಾಧ್ಯವಿಲ್ಲ; ಎಚ್‌ಡಿಕೆಗೆ ಡಿಕೆಶಿ ತಿರುಗೇಟು

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಬಿಬಿಎಂಪಿಯಲ್ಲಿ ಏನಾಗುತ್ತಿದೆ ಎಂಬುದನ್ನು ಬಿಚ್ಚಿಡುತ್ತೇನೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ತಡೆಯಲು ಆಗುವುದಿಲ್ಲ. ಆದರೆ ಬಿಚ್ಚಿಡುವುದ್ದಕ್ಕೆ ಎಲ್ಲರಿಗೂ ಅವಕಾಶವಿದೆ. ಹೀಗಾಗಿ ಅವರು ಬಿಚ್ಚಿ, ಬಿಚ್ಚಿ ಬಯಲು ಮಾಡಲಿ ಎಂದು ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿ ಏನು ಬೇಕಾದರೂ ಮಾಡಲಿ, ಅವರ ಬಳಿ ಇರುವ ಮಾಹಿತಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಪೆನ್‌ಡ್ರೈವ್ ಮಾಹಿತಿ ಬಹಿರಂಗಪಡಿಸಿದರೆ ಸಿಒಡಿ ತನಿಖೆ ಮಾಡಿಸಿ ತಮ್ಮ ಪರ ವರದಿ ಮಾಡಿಸಿಕೊಳ್ಳುತ್ತಾರೆಂಬ ಕುಮಾರಸ್ವಾಮಿಯವರು ಮಾಡಿರುವ ಆರೋಪದ ಬಗ್ಗೆ ಉತ್ತರಿಸಿ, ನಮಗೆ ಅವರಷ್ಟು ಅನುಭವವಿಲ್ಲ. ಈಗ ಅವರನ್ನು ಅಣ್ಣ ಎಂದು ಕರೆಯುವಂತಿಲ್ಲ. ಮುಂದಿನ ಜನ್ಮದ ಬಗ್ಗೆ ಬೇರೆ ಮಾತಾಡಿದ್ದಾರೆ. ಇರಲಿ, ಎಲ್ಲಾ ಪಕ್ಷಗಳಿಗೂ ಬಿಚ್ಚಿಡುವುದಕ್ಕೆ ಅವಕಾಶವಿದೆ ಎಂದರು.

ರಾಜಕೀಯ ಯುದ್ಧ ಮಾಡಿ ಮುಗಿದಿದೆ. ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರಿಗೆ ಅಸೂಯೆ. ನನಗೆ ಅಧಿಕಾರ, ಅವಕಾಶ ಸಿಗಲಿಲ್ಲ ಎಂದು ಕೈ, ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಬಿಬಿಎಂಪಿ ಕರ್ಮಕಾಂಡ ವಿಚಾರವಾಗಿ ಯಾವಾಗ ದಾಖಲೆ ಸಮೇತ ಮಾತನಾಡುತ್ತೀರಿ ಎಂಬ ಪ್ರಶ್ನೆಗೆ, ಅದಕ್ಕೆ ಯಾಕಿಷ್ಟು ಆತುರ? ಶುಭ ಘಳಿಗೆ, ಮುಹೂರ್ತ ಎಲ್ಲಾ ಕೂಡಿಬರಲಿ. ಯಾರು ಏನೇನು ಬಿಚ್ಚಿಡುತ್ತಾರೋ ಬಿಚ್ಚಿಟ್ಟು ಮುಗಿಸಲಿ. ನನಗೆ ಅವಸರವೇನಿಲ್ಲ. ಎಲ್ಲರ ಪಿಕ್ಚರ್ ಮುಗಿಯಲಿ. ತನಿಖೆಯ ಅಂಶಗಳು ಕೈ ಸೇರಿದ ತಕ್ಷಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ನನ್ನ ಘನತೆಗೆ ಧಕ್ಕೆಯಾಗುವಂತೆ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ (ಪ್ರಾಪೊಗಂಡ) ಮಾಡಲಾಗಿದೆ. ಎಲ್ಲದರ ಬಗ್ಗೆಯೂ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು. ಕುಮಾರಸ್ವಾಮಿ ಅವರ ಬಗ್ಗೆ ಯಾಕಿಷ್ಟು ಮೃದು ಧೋರಣೆ ಎಂದು ಕೇಳಿದಾಗ, ಅವರಿಗೆ ಪ್ರಮೋಷನ್ ಕೊಟ್ಟಿದ್ದೆವು. ಅದನ್ನು ಬೇಡ ಎಂದಿದ್ದಾರೆ. ಮುಂದಿನ ಜನ್ಮದಲ್ಲಾದರೂ ಸಿಗಲಿದೆ ಎಂದು ಹೇಳಿದ್ದಾರಲ್ಲ ಬಹಳ ಸಂತೋಷ ಎಂದು ತಿಳಿಸಿದರು.