ನ್ಯೂಸ್

ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ; ಬದಲಾವಣೆ ಕೂಗಿನ ನಡುವೆಯೇ ವಿರೋಧಿಗಳಿಗೆ ಖಡಕ್ ಟಾಂಗ್​ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ದಿನ ಕಳೆದಂತೆ ಬಣ ಬಡಿದಾಟ ಜೋರಾಗುತ್ತಿದ್ದು, ಒಂದಿಲ್ಲೊಂದು ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ಹಾಗೂ ಶಾಸಕರು ಸುದ್ದಿಯಾಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷದ ಬದಲಾವಣೆಗೆ ಸಿಎಂ ಸಿದ್ದರಾಮಯ್ಯ ಬಣ ಪ್ರಮುಖವಾಗಿ ಆಗ್ರಹಿಸುತ್ತಿರುವ ನಡುವೆಯೇ ಡಿಸಿಎಂ ಡಿಕೆ. ಶಿವಕುಮಾರ್​ (DK Shivakumar) ವಿರೋಧಿಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಗೃಹಕಚೇರಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿಕೆ. ಶಿವಕುಮಾರ್ (DK Shivakumar), ನನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಮನೇಲಿ ಕೂತ್ಕೊಂಡು ಇರೋಕೆ ಅಲ್ಲ. ನನ್ನ ಶಕ್ತಿ, ನನ್ನ ವರ್ಚಸ್ಸು ಏನು ಅಂತ ಎಲ್ಲರಿಗೂ ಗೊತ್ತು. ನನ್ನನ್ನ ದೆಹಲಿ, ಆಂಧ್ರ, ತೆಲಂಗಾಣ, ಹಿಮಾಚಲ ಪ್ರದೇಶಗಳಿಗೆ ಸುಮ್ಮನೆ ಕರೀತಾರಾ 5 ವರ್ಷ ಪಕ್ಷದ ಅಧ್ಯಕ್ಷನಾಗಿದ್ದೆ, ಉಪಮುಖ್ಯಮಂತ್ರಿಯಾಗಿದ್ದೆ. 1990 ರಿಂದ ಸಚಿವನಾಗಿದ್ದೆ. ಪಕ್ಷ ನನಗೆ ಇಷ್ಟೆಲ್ಲಾ ಜವಾಬ್ದಾರಿ ಕೊಟ್ಟು ಬೆಳೆಸಿದ ಮೇಲೆ ನಾನು ಮನೇಲಿ ಕೂರೋಕೆ ಸಾಧ್ಯನಾ. ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ವಿರೋಧಿಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಾನು ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷನಾಗಿದ್ದೆ. ಈಗ ಉಪಮುಖ್ಯಮಂತ್ರಿಯಾಗಿದ್ದೇನೆ. ಪಕ್ಷ ನನಗೆ ಹಲವು ಜವಾಬ್ದಾರಿಗಳನ್ನು ಕೊಟ್ಟು ನಾಯಕನನ್ನಾಗಿ ಮಾಡಿದೆ. ನನಗೆ ವರ್ಚಸ್ಸಿದೆ, ಜನಾನುರಾಗಿತ್ವವಿದೆ. ನನ್ನನ್ನ ದೆಹಲಿ, ಬಿಹಾರ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಎಲ್ಲೆಡೆ ಕರೆಯುತ್ತಾರೆ. ನನಗೆ ನಾಯಕತ್ವದ ಗುಣವಿದೆ ಅಂತ ಬೇರೆ ಬೇರೆ ರಾಜ್ಯಗಳಿಗೆ ಕರೆಯುತ್ತಾರೆ. ನಿಮ್ಮನ್ನ ಕರೀತಾರ? ಬೇರೆಯವರನ್ನ ಕರೀತಾರ? ಎಂದು ಪ್ರಶ್ನೆ ಮಾಡುವ ಮೂಲಕ ಸಿದ್ದರಾಮಯ್ಯ ಬಣದ ನಾಯಕರಿಗೆ ಪ್ರಶ್ನಿಸಿದ್ದಾರೆ.

ನನಗಿರುವ ಅನುಭವ, ಶಕ್ತಿ, ವರ್ಚಸ್ಸು ಎಲ್ಲವನ್ನೂ ಪಕ್ಷಕ್ಕೆ ಬಳಸಿಕೊಳ್ಳಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪಕ್ಷ ನನಗೆ ಇಷ್ಟೆಲ್ಲ ನಾಯಕತ್ವ ಕೊಟ್ಟ ಮೇಲೆ ನನ್ನ ನಾಯಕತ್ವದಲ್ಲಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡ್ತೇವೆ. ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಸಿದ್ದರಾಮಯ್ಯನವರ ನಾಯಕತ್ವ ಕೂಡ ಇರುತ್ತದೆ ಎಂದು ಹೇಳಿದ್ದಾರೆ.
ದೆಹಲಿಗೆ ಹೋದಾಗ ಹೈಕಮಾಂಡ್ ಭೇಟಿ ಮಾಡಲೇಬೇಕಲ್ಲ? ನಾನು ಪಕ್ಷದ ಅಧ್ಯಕ್ಷ. ನಮ್ಮ ಪಕ್ಷದ ಕಚೇರಿಗೆ ಹೋಗದೆ ಬಿಜೆಪಿ ಕಚೇರಿಗೆ ಹೋಗಬೇಕಾ? ಕೇಶವಕೃಪಾಗೆ ಹೋಗಲು ಸಾಧ್ಯವೇ? ಕಾಂಗ್ರೆಸ್ ಕಚೇರಿ ನಮಗೆ ದೇವಸ್ಥಾನ ಇದ್ದಂತೆ. ನಾನು ಅಲ್ಲಿಗೆ ಹೋಗಿ ಪ್ರಾರ್ಥನೆ ಮಾಡಿದ್ದೇನೆ ಅಷ್ಟೇ. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ ಅಷ್ಟೇ. ಪ್ರಯತ್ನ ವಿಫಲ ಆಗಬಹುದು, ಆದರೆ ಪ್ರಾರ್ಥನೆ ವಿಫಲ ಆಗೋದಿಲ್ಲ ಎಂದು ಡಿಸಿಎಂ ಡಿಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.