ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ಅರಮನೆ ಮೈದಾನದಲ್ಲಿ ಆಟೋ ಚಾಲಕರ ಜತೆ ಗುರುವಾರ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಶಿವಕುಮಾರ್ ಅವರು ಅರಮನೆ ಮೈದಾನದ ಪ್ರವೇಶದ್ವಾರದಿಂದ ಸಂವಾದ ಸ್ಥಳದವರೆಗೂ ಆಟೋ ಚಾಲನೆ ಮಾಡಿ ಚಾಲಕ ಸಮೂಹದ ಜತೆ ತಾವು ಇರುವುದಾಗಿ ವಿಶ್ವಾಸ ತುಂಬಿದರು.ಇಂದಿನ ದಿನವನ್ನು ನಾನು ಯಾವತ್ತೂ ಮರೆಯುವುದಿಲ್ಲ. ನಾನಿಂದು ಪವಿತ್ರ ಆಟೋ ಚಾಲನೆ ಮಾಡಿದ್ದೇನೆ. ನೀವು ಸ್ವಾಭಿಮಾನದ ಬದುಕು ನಡೆಸುತ್ತಿದ್ದೀರಿ. ಈ ದೇಶದ ಜನ ಸೇವಕರು ನೀವು. ಜನ ಎಲ್ಲಿಗೆ ಹೋಗಬೇಕು ಎನ್ನುತ್ತಾರೋ ಅಲ್ಲಿಗೆ ತಲುಪಿಸುವ ಪವಿತ್ರ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಕುಟುಂಬದವನಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.ಆಟೋ ಚಾಲಕರ ಸಂವಾದದ ವೇಳೆ ಶಾಸಕ ರಿಜ್ವಾನ್ ಅರ್ಶದ್ ಅವರು ಉಪಸ್ಥಿತರಿದ್ದರು.