DJhalli 
ನ್ಯೂಸ್

ಶಾಸಕನ ಮನೆ, ಪೊಲೀಸ್​ ಠಾಣೆಗೆ ಬೆಂಕಿ ಇಟ್ಟ ಗಲಭೆಕೋರರು ನೇರವಾಗಿ ಹೋಗಿದ್ದು ದರ್ಗಾಕ್ಕೆ!

ಚಿಕ್ಕಬಳ್ಳಾಪುರ: ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ಭೈರಸಂದ್ರದಲ್ಲಿ ಬೆಂಕಿ ಇಟ್ಟು ದಾಂಧಲೆ ನಡೆಸಿದ್ದ ಗಲಭೆಕೋರರು ಸೀದಾ ಎಲ್ಲಿಗೆ ಹೋಗಿದ್ರು ಗೊತ್ತಾ? ಮಾಡೋದೆಲ್ಲ ಮಾಡಿ ಪಶ್ಚಾತಾಪಕ್ಕೆಂದು 200ಕ್ಕೂ ಹೆಚ್ಚು ಪುಂಡರು ದರ್ಗಾಕ್ಕೆ ಭೇಟಿ ಕೊಟ್ಟಿದ್ದಾರೆ!

ತಣ್ಣಗಿದ್ದ ಬೆಂಗಳೂರಿನಲ್ಲಿ ಸಾವಿರಾರು ಮಂದಿ ರಾತ್ರೋರಾತ್ರಿ ಗಲಭೆ ಮಾಡಿ ಹಿಂಸಾಚಾರ ಸೃಷ್ಟಿಸಿದ್ದರು. ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ, ಪೊಲೀಸ್​ ಠಾಣೆಗೂ ಬೆಂಕಿ ಇಟ್ಟು ದಾಂಧಲೆ ನಡೆಸಿದ್ದರು. ಸಾರ್ವಜನಿಕರು ಮತ್ತು ಪೊಲೀಸರ ವಾಹನಗಳಿಗೂ ಬೆಂಕಿ ಇಟ್ಟು ಹಲ್ಲೆ ನಡೆಸಿದ್ದರು. ಈ ಪೈಕಿ 200ಕ್ಕೂ ಹೆಚ್ಚು ಗಲಭೆಕೋರರು ಚಿಂತಾಮಣಿಯ ಮುರುಗಮಲ್ಲ ದರ್ಗಾಕ್ಕೆ ಹೋಗಿದ್ದರು ಎಂಬ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ.

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಗಲಭೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ತಪ್ಪಿತಸ್ಥರ ಎಡೆಮುರಿ ಕಟ್ಟಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಆಯಾಮಗಳಲ್ಲೂ ತನಿಖೆ ಚುರುಕುಗೊಂಡಿದ್ದು, ತಲೆಮರೆಸಿಕೊಂಡಿರುವ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸ್​ ಇಲಾಖೆ ಬಲೆ ಬೀಸಿದೆ. ಈ ವೇಳೆ ಟವರ್​ ಲೊಕೇಶನ್​ನಲ್ಲಿ 200ಕ್ಕೂ ಹೆಚ್ಚು ಗಲಭೆಕೋರರು ಚಿಂತಾಮಣಿಯ ಮುರುಗಮಲ್ಲ ದರ್ಗಾಕ್ಕೆ ಹೋಗಿದ್ದರು ಎಂಬ ಅಂಶ ಬಯಲಾಗಿದೆ.

ಪ್ರಕರಣದ ಆರೋಪಿಗಳು ಚಿಂತಾಮಣಿಯಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಪೊಲೀಸರ ಹೈಅಲರ್ಟ್ ಇದೆ. ಮುರುಗಮಲ್ಲ ದರ್ಗಾ ಮತ್ತು ನಿಮ್ಮಕಾಯಿಲಹಳ್ಳಿ ದರ್ಗಾ ಸೇರಿ ವಿವಿಧೆಡೆ ಪೊಲೀಸರ ಕಣ್ಗಾವಲಿದೆ. ಈ ದರ್ಗಾಗಳಿಗೆ ಅಪರಿಚಿತರು ಆಗಮಿಸಿದರೆ ಅವರ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.