ಕೊಡಗು: ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ಭೈರಸಂದ್ರದಲ್ಲಿ ಬೆಂಕಿ ಇಟ್ಟು ದಾಂಧಲೆ ನಡೆಸಿದ್ದು ಎಸ್ಡಿಪಿಐನ ಪುಂಡರು. ಎಸ್ಡಿಪಿಐ ಮತ್ತು ಪಿಎಫ್‌ಐ ಅನ್ನು ನಿಷೇಧಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಎಸ್ಡಿಪಿಐ ನಿಷೇಧದಬಗ್ಗೆ ಗೃಹ ಸಚಿವರೇ ಸ್ಪಷ್ಟವಾಗಿ ಹೇಳಿದ್ದಾರೆ. ಮಂಗಳೂರು ಘಟನೆ ನಂತರ ಆ ಪ್ರಕ್ರಿಯೆ ಶುರುವಾಗಿದೆ. ಬೆಂಗಳೂರು ಗಲಭೆಯಲ್ಲಿ ಎಸ್ಡಿಪಿಐ ಕುಕೃತ್ಯದ ಬಗ್ಗೆ ಪೂರಕ ದಾಖಲೆಗಳಿದ್ದು, ಈ ಸಂಘಟನೆ ನಿಷೇಧ ಆಗುತ್ತದೆ. ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಮೇಲೆ ವಿಶ್ವಾಸ ಇದೆ ಎಂದು ಭಾಗಮಂಡಲದಲ್ಲಿ ಹೇಳಿದರು.
ಕಾಂಗ್ರೆಸ್ನ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ಶಿಕ್ಷಣವಂತರು, ಒಳ್ಳೆಯ ಹಿನ್ನೆಲೆ ಇರುವವರು. ಆದ್ರೆ ಯಾವಾಗಲೂ ಜನರ ದಾರಿ ತಪ್ಪಿಸುತ್ತಿರುತ್ತಾರೆ ಎಂದು ಪ್ರತಾಪ್ ಸಿಂಹ ಕುಟುಕಿದರು. ಕಾಂಗ್ರೆಸ್ ಶಾಸಕರ ಮನೆ ಮೇಲೆ ಎಸ್ಡಿಪಿಐ ದಾಂಧಲೆ ನಡೆಸಿದೆ. ಆದರೂ ದಿನೇಶ್ ಗುಂಡೂರಾವ್ಗೆ ಆ ಸಂಘಟನೆ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ದರ್ದು ಏನಿದೆ? ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಅವರಿಗೆ ಮನೆಯಲ್ಲಿ ಒತ್ತಡ ಇರಬಹುದೇನೋ ಎಂದು ಲೇವಡಿ ಮಾಡಿದರು.