ನ್ಯೂಸ್

ಡಿಜೆ ಹಳ್ಳಿ ಗಲಭೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗುಂಡೇಟು, ಗಾಯಗೊಂಡವರು ಮನೆಯಲ್ಲೇ ಅಡಗಿದ್ದಾರೆ...

ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಮೂವರು ಯುವಕರು ಬಲಿಯಾಗಿದ್ದು, ಅವರ ಗುರುತು ಪತ್ತೆಯಾಗಿದೆ.

ಡಿ.ಜೆ.ಹಳ್ಳಿ ನಿವಾಸಿ ಯಾಸೀರ್ (19), ವಾಜಿದ್ (19) ಮೃತರು. ಇನ್ನೊಬ್ಬ ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ದಾಂಧಲೆ ನಡೆಸಿದ ಆರೋಪದಡಿ ಈವರೆಗೆ 137 ಮಂದಿಯನ್ನು ಬಂಧಿಸಲಾಗಿದ್ದು, ಮತ್ತಷ್ಟು ಆರೋಪಿಗಳಿಗಾಗಿ ಶೋಧ‌ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಪಾರ್ಕಿಂಗ್ ಸ್ಥಳದಲ್ಲಿದ್ದ 30ಕ್ಕೂ ಹೆಚ್ಚು ದ್ವಿಚಕ್ರ ವಾಹನ ಸುಟ್ಟು ಕರಲಾಗಿವೆ. ಶಾಸಕ ಅಖಂಡ ಶ್ರೀನಿವಾಸ್​ ನಿವಾಸ, ಕಚೇರಿ

ಸೇರಿದಂತೆ ಆ ಏರಿಯಾದ ಅಂಗಡಿಗಳು, ಪೊಲೀಸ್​ ಠಾಣೆ, ಪೊಲೀಸ್​ ವಾಹನ, ಸಾರ್ವಜನಿಕರ ವಾಹನಗಳಿಗೂ ಬೆಂಕಿ ಇಟ್ಟ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. ಹಿಂಸಾಚಾರಕ್ಕೆ ತಿರುಗಿದ ಗಲಭೆಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಹಾರಿಸಿದ ಗುಂಡೇಟು 15ಕ್ಕೂ ಗಲಭೆಕೋರರಿಗೆ ತಗುಲಿದ್ದು, ಆಸ್ಪತ್ರೆಯಲ್ಲಿ ‌ಏಳು‌ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಗಾಯಾಳುಗಳು ಮನೆಯಲ್ಲೇ ಅಡಗಿರುವ ಶಂಕೆ ವ್ಯಕ್ತವಾಗಿದೆ.

ಇಲ್ಲಿನ ವಾತಾವರಣ ಪ್ರಕ್ಷ್ಯುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ಮುಂಬೈಯಿಂದ ಮೂರು ಕ್ಷಿಪ್ರ ಕಾರ್ಯಪಡೆ ನಗರಕ್ಕೆ ಆಗಮಿಸಿದ್ದು, ನಗರದಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್​ಭೈರಸಂದ್ರದ ರಸ್ತೆಯುದ್ದಕ್ಕೂ ಪೊಲೀಸ್​ ಬಂದೋಬಸ್ತ್ ಮಾಡಲಾಗಿದ್ದು, ಕಿಡಿಗೇಡಿಗಳು ಸುಟ್ಟು ಹಾಕಿರುವ ವಾಹನಗಳನ್ನು ಪೊಲೀಸರು ರಸ್ತೆಬದಿಯಲ್ಲಿ ಹಾಕಿದ್ದಾರೆ. ಇಡೀ ಪ್ರದೇಶದಲ್ಲಿ ವಾಹನಗಳ ಓಡಾಟ ಮಿತಿಗೊಳಿಸಲಾಗಿದ್ದು, ಪ್ರತಿಯೊಂದು ವಾಹನವನ್ನೂ ತಪಾಸಣೆ ಮಾಡಿ ಬಿಡಲಾಗುತ್ತಿದೆ‌.

ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಶರಣಪ್ಪ, ರಾಹುಲ್ ಕುಮಾರ್ ಶಹಪುರ್‌ವಾಡ, ರವಿಕುಮಾರ್ ಸೇರಿ ಮತ್ತಿತರ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.