ನ್ಯೂಸ್

'ಜಮೀರ್​ ಅಹ್ಮದ್​ ಬೆಂಗಳೂರು ಗಲಭೆಯ ಡೈರೆಕ್ಟರ್​, ಪ್ರೊಡ್ಯೂಸರ್​...'

ಚಿಕ್ಕಮಗಳೂರು: ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಕಾವಲ್​ಭೈರಸಂದ್ರ ಗಲಭೆ ಆರೋಪಿಗಳ ರಕ್ಷಣೆಗೆ ನಿಂತಿರುವ ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್​ ಖಾನ್​ ಅವರೇ ಇಡೀ ಪ್ರಕರಣದ ಪ್ರೊಡ್ಯೂಸರ್​ ಮತ್ತು ಡೈರೆಕ್ಟರ್​. ಇದರಲ್ಲಿನ ಆ್ಯಕ್ಟರ್​ಗಳು ಯಾರೆಂದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಹಿಂದೆ ಪಾದರಾಯನಪುರದಲ್ಲಿ ಕರೊನಾ ಸೇನಾನಿಗಳ ಮೇಲೆ ಹಲ್ಲೆ ನಡೆಸಿ ಜೈಲಿಗೆ ಹೋಗಿ ಬಂದವರಿಗೆ

ಹಾರ ಹಾಕಿ ಸನ್ಮಾನ ಮಾಡಿ ಇನ್ನಷ್ಟು ಪ್ರಚೋದಿಸುವ ಕೆಲಸ ಮಾಡಿದ್ದು ಜಮೀರ್​ ಅಹ್ಮದ್​. ಬೆಂಗಳೂರಿನ ಗಲಭೆಯ ಗೋಲಿಬಾರ್​ನಲ್ಲಿ ಸತ್ತವರು ಯಾರೂ ಅಮಾಯಕರಲ್ಲ. ಅಮಾಯಕರಾಗಿದ್ದರೆ ಮನೆಯಲ್ಲಿ ಮಲಗಿರುತ್ತಿದ್ದರು. ಹಾಗಿದ್ದರೆ 300ಕ್ಕೂ ಹೆಚ್ಚು ವಾಹನವನ್ನು ಸುಟ್ಟ ಕಿರಾತಕರು ಯಾರು ಎಂದು ಪ್ರಶ್ನಿಸಿದರು. ಸಮಾಜದ ಕಿಡಿಗೇಡಿಗಳಿಗೆ ಬೆಂಬಲವಾಗಿ ನಿಂತರೆ ಅಲ್ಪಸಂಖ್ಯಾತರ ಮುಖಂಡ ಎಂಬ ಟ್ರಂಪ್​ ಕಾರ್ಡ್​ ಸಿಗುತ್ತದೆ ಎನ್ನುವ ಕಾರಣಕ್ಕೆ ಜಮೀರ್​ ಅಹ್ಮದ್​ ಈ ಕೆಲಸ ಮಾಡುತ್ತಿದ್ದಾರೆ. ಯಾರು ಏನೇ ಮಾಡಿದರೂ ನಾನು ಬೆಂಬಲಕ್ಕಿದ್ದೇನೆ ಎನ್ನುವ ಸಂದೇಶ ನೀಡಲು ಹೊರಟಿದ್ದಾರೆ. ಈ ಬಗ್ಗೆ ಅವರ ಪಕ್ಷ ಯೋಚಿಸಬೇಕು ಎಂದು ಕಾಂಗ್ರೆಸ್​ಗೆ ಸಚಿವರು ಮಾತಿನಲ್ಲೇ ತಿವಿದರು.

ಗಲಭೆಗೆ ಮುಂದಾಳತ್ವ ನೀಡಿದ್ದು ಎಸ್​ಡಿಪಿಐ. ಆ್ಯಕ್ಟಿಂಗ್​ ಮಾಡಿದವರು ಗಲಭೆಕೋರರು. ಹೀಗಾಗಿ ಇಡೀ ಪ್ರಕರಣದ ಬಗ್ಗೆ ಜಮೀರ್​ಗೆ ಚೆನ್ನಾಗಿ ಗೊತ್ತಿದೆ. ಅವರು ಎಲ್ಲವನ್ನೂ ಸ್ಪಷ್ಟಪಡಿಸಲಿ. ಘಟನೆಯಿಂದಾದ ಸಂಪೂರ್ಣ ನಷ್ಟವನ್ನು ಅವರೇ ಭರಿಸಲಿ ಎಂದರು.

ಕಾಂಗ್ರೆಸ್​ ಪಕ್ಷ ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗುವ ಕೆಲಸ ಮಾಡುತ್ತಿದೆ. ಆಧಾರ ಇದ್ದರೆ ಎಸ್​ಡಿಪಿಐ ಬ್ಯಾನ್​ ಮಾಡಲಿ ಎಂದು ದಿನೇಶ್​ ಗುಂಡೂರಾವ್​ ಹೇಳುತ್ತಾರೆ. ಈ ಮೂಲಕ ಆ ಸಂಘಟನೆ ಪರವಾಗಿ ಬೇಲ್​ ಅಪ್ಲಿಕೇಶನ್​ ಹಾಕಿ ವಕಾಲತ್ತು ವಹಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ಮೊನ್ನೆ ಗಲಭೆ ನಡೆಸಿ ಬೆಂಕಿ ಹಾಕಿದವರೆಲ್ಲರಿಗೂ ಜಾಮೀನು ಮತ್ತು ವಕಾಲತನ್ನು ಕಾಂಗ್ರೆಸ್​ ಪಕ್ಷವೇ ಒದಗಿಸುತ್ತದೆ. ಇದರಲ್ಲಿ ಅನುಮಾನ ಬೇಡ ಎಂದರು.

ನವೀನ್​ ಹಾಕಿದ ಪೋಸ್ಟ್​ನ ಸಮರ್ಥನೆಗೆ ನಾವು ನಿಂತುಕೊಂಡಿಲ್ಲ. ತಪ್ಪು ಮಾಡಿದ್ದರೆ ಅವನಿಗೂ ಶಿಕ್ಷೆಯಾಗಬೇಕು. ರಾಮ, ಕೃಷ್ಣನ ಬಗ್ಗೆ ಪೋಸ್ಟ್​ ಹಾಕಿದ್ದವರಿಗೂ ಶಿಕ್ಷೆಯಾಗಬೇಕು. ಕಾನೂನು ಕೈಗೆತ್ತಿಕೊಂಡವರಿಗೂ ಶಿಕ್ಷೆಯಾಗಬೇಕು ಎಂದರು.