ನ್ಯೂಸ್

ರೈತರಿಗೆ ದೀಪಾವಳಿ ಉಡುಗೊರೆ; ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

ನವದೆಹಲಿ: ನರೇಂದ್ರ ಮೋದಿ ಸರ್ಕಾರ ದೇಶದ ಅನ್ನದಾತರು ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಶೇ.3 ಹೆಚ್ಚುವರಿ ತುಟ್ಟಿಭತ್ಯೆ ಕಂತಿನ ಜತೆಗೆ ನಿವೃತ್ತ ನೌಕರರಿಗೂ ತುಟ್ಟಿಭತ್ಯೆ ಗಿಫ್ಟ್ ನೀಡಿದೆ. ಇದರನ್ವಯ ಈಗ ಅಸ್ತಿತ್ವದಲ್ಲಿರುವ ಮೂಲವೇತನದ ಮೇಲೆ ಶೇ. 50 ಡಿಯರ್​ನೆಸ್ ಅಲೋವೆನ್ಸ್ (ಡಿಎ) ಹಾಗೂ ಪಿಂಚಣಿದಾರರಿಗೆ ಈಗಿನ ಪಿಂಚಣಿ ಮೇಲೆ ಶೇ. 50 ಡಿಯರ್​ನೆಸ್ ರಿಲೀಫ್​ಗೆ (ಡಿಆರ್) ಹೆಚ್ಚುವರಿಯಾಗಿ ಶೇ.3 ನೀಡಲು ಅನುಮೋದನೆ ನೀಡಲಾಗಿದೆ.

ಈ ವರ್ಷದ ಜುಲೈ 1ರಿಂದಲೇ ಅನ್ವಯವಾಗುವಂತೆ ಈ ಹೆಚ್ಚಳ ಜಾರಿಗೆ ಬರಲಿದೆ. ಈ ಹೆಚ್ಚಳ ಏಳನೇ ಕೇಂದ್ರ ವೇತನ ಆಯೋಗದ ಶಿಫಾರಸು ಆಧರಿಸಿದ ಸ್ವೀಕೃತ ಸೂತ್ರಕ್ಕೆ ಅನುಸಾರವಾಗಿದೆ. ಈ ಡಿಎ-ಡಿಆರ್ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 9,448.35 ಕೋಟಿ ರೂ. ಹೊರೆ ಆಗಲಿದೆ. ಅಲ್ಲದೆ, ಸಂಪುಟದ ಈ ಅನುಮೋದನೆಯಿಂದ ಕೇಂದ್ರ ಸರ್ಕಾರದ 49.18 ಲಕ್ಷ ಉದ್ಯೋಗಿಗಳು, 64.89 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.

ಗಂಗಾ ನದಿ ಮೇಲೆ ರೈಲು-ರಸ್ತೆ ಸೇತುವೆ: ಉತ್ತರಪ್ರದೇಶದ ವಾರಾಣಸಿಯಲ್ಲಿ ಗಂಗಾ ನದಿ ಮೇಲೆ ಹೊಸ ರೈಲು ಹಾಗೂ ರಸ್ತೆ (ರೈಲ್-ಕಂ-ರೋಡ್) ಸೇತುವೆ ನಿರ್ವಿುಸುವುದಕ್ಕೂ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ‘ಸಾರಿಗೆ ಸಾಮರ್ಥ್ಯದ ಮೇಲೆ ಹೇಳುವುದಾದರೆ ಇದು ಅತ್ಯಂತ ದೊಡ್ಡ ರೈಲು-ರಸ್ತೆ ಸೇತುವೆಗಳಲ್ಲಿ ಒಂದಾಗಿರಲಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಈ ರೈಲು-ರಸ್ತೆ ಸೇತುವೆ ರೈಲ್ವೆಯ ನಾಲ್ಕು ಪಥಗಳನ್ನು ಹಾಗೂ ಷಟ್ಪಥ ಹೆದ್ದಾರಿಯನ್ನು ಹೊಂದಿರಲಿದೆ. ಒಂದು ಕಿಲೋಮೀಟರ್​ಗೂ ಅಧಿಕ ಉದ್ದದ ಈ ಸೇತುವೆಯನ್ನು ಸುಮಾರು 150 ವರ್ಷಗಳವರೆಗೆ ಬಾಳಿಕೆ ಬರುವ ರೀತಿಯಲ್ಲಿ ನಿರ್ವಿುಸಲಾಗುವುದು. ಇದೊಂದು ಸಂಕೀರ್ಣ ನಿರ್ವಣವಾದ್ದರಿಂದ ಪೂರ್ಣಗೊಳ್ಳಲು ಸುಮಾರು ನಾಲ್ಕು ವರ್ಷಗಳು ಬೇಕಾಗುತ್ತವೆ ಎಂದು ವೈಷ್ಣವ್ ತಿಳಿಸಿದರು. ಈ ಹೊಸ ಸೇತುವೆಯಿಂದ ಡೀಸೆಲ್ ರಫ್ತುವಿನಲ್ಲಿ ವಾರ್ಷಿಕ ಸುಮಾರು 8 ಕೋಟಿ ಲೀಟರ್ ತಗ್ಗಲಿದ್ದು, ವರ್ಷಕ್ಕೆ ಅಂದಾಜು 638 ಕೋಟಿ ರೂ. ಉಳಿತಾಯವಾಗಲಿದೆ. ಈ ಬಹುಪಥಗಳ ಯೋಜನೆಗೆ 2,642 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ಪಿಎಂ-ಆಶಾಗೆ 35 ಸಾವಿರ ಕೋಟಿ ರೂ.: ಪ್ರಧಾನಮಂತ್ರಿ ಅನ್ನದಾತ ಆದಾಯ ಸಂರಕ್ಷಣಾ ಅಭಿಯಾನಕ್ಕೆ (ಪಿಎಂ-ಆಶಾ/ಕMಅಅಖಏಅ) 35 ಸಾವಿರ ಕೋಟಿ ರೂ.ಗಳನ್ನು ಸಂಪುಟ ಸಮಿತಿ ಮಂಜೂರುಗೊಳಿಸಿದೆ. ರೈತರಿಗೆ ಲಾಭದಾಯಕ ಬೆಲೆ ಹಾಗೂ ಗ್ರಾಹಕರಿಗೆ ಸ್ಥಿರ ಮಾರುಕಟ್ಟೆ ಬೆಲೆ ಒದಗಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿದ ಸಚಿವ ಅಶ್ವಿನಿ ವೈಷ್ಣವ್, ಗರಿಷ್ಠ ಕಟಾವಿನ ಸಂದರ್ಭದಲ್ಲಿ ಮಾರಾಟ ಸಂಕಷ್ಟದಿಂದ ರೈತರನ್ನು ರಕ್ಷಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ತಿಳಿಸಿದರು.

ಅನ್ನದಾತರಿಗೂ ಕೊಡುಗೆ: 2025-26ರ ಮಾರಾಟದ ಋತುವಿನ ಎಲ್ಲ ಕಡ್ಡಾಯ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಹೆಚ್ಚಿಸುವ ನಿರ್ಧಾರಕ್ಕೂ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಅವರ ಉತ್ಪನ್ನ ಗಳಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಿ ಕೊಳ್ಳಲು ಸಂಪುಟ ಸಮಿತಿ ಬೆಂಬಲ ಬೆಲೆ ಹೆಚ್ಚಿಸಿದೆ.