ನ್ಯೂಸ್

ಫ್ಲೋರಿಡಾ ರಾಜ್ಯದ ವಿಧಾನಸೌಧದಲ್ಲಿ ಮೊದಲ ಬಾರಿಗೆ ದೀಪಾವಳಿ ಹಬ್ಬದ ಸಂಭ್ರಮ; ಇದು ಐತಿಹಾಸಿಕ ಕ್ಷಣ: ಬೆಂಕಿ ಬಸಣ್ಣ | Diwali Celebration

|ಬೆಂಕಿ ಬಸಣ್ಣ ಎನ್​.ವೈ

ಅಮೆರಿಕ: ಟಲ್ಲಾಹಾಸ್ಸಿಯ ಫ್ಲೋರಿಡಾ ರಾಜ್ಯ ವಿಧಾನಸೌಧ ಈ ದೀಪಾವಳಿಗೆ(Diwali Celebration) ಸಾಕ್ಷಿಯಾದಾಗ, ಅದು ಕೇವಲ ದೀಪದ ಬೆಳಕು ಮಾತ್ರವಲ್ಲ – ಅದು ನಮ್ಮ ಸಂಸ್ಕೃತಿಯ, ಸಮುದಾಯದ ಮತ್ತು ಹೆಮ್ಮೆಯ ಬೆಳಕು ಆಗಿತ್ತು ಎಂದು ಬೆಂಕಿ ಬಸಣ್ಣ ಹೇಳಿದರು.

ಫ್ಲೋರಿಡಾ ರಾಜ್ಯ ಸೆನೇಟರ್ ಫೆಂಟ್ರಿಸ್ ಡ್ರಿಸ್ಕೆಲ್ ಅವರ ಮಾರ್ಗದರ್ಶನದಲ್ಲಿ, ಫ್ಲೋರಿಡಾ ಸರ್ಕಾರದ ಸಹಕಾರದೊಂದಿಗೆ ದೀಪಾವಳಿಯನ್ನು ಮೊದಲ ಬಾರಿಗೆ ಸರ್ಕಾರಿ ಮಟ್ಟದಲ್ಲಿ ಆಚರಿಸಲಾಯಿತು. ಈ ಮೂಲಕ ಭಾರತೀಯ ಸಂಸ್ಕೃತಿಗೆ ನೀಡಲಾದ ಗೌರವ ಇನ್ನೊಂದು ಮಹತ್ವದ ಹೆಜ್ಜೆಯಾಯಿತು ಎಂದರು.

ಇದು ದಶಕಗಳ ಹಿಂದಿನಿಂದ ಅಮೆರಿಕದಲ್ಲಿ ಬೆಳೆದು ಬಂದ ಭಾರತೀಯ ಸಮುದಾಯದ ದುಡಿಮೆ, ಕೊಡುಗೆ ಮತ್ತು ನಿಷ್ಠೆಗೆ ನೀಡಲಾದ ಗೌರವ. ಇದು ನಮ್ಮ ಸಂಸ್ಕೃತಿಯ ಸ್ಮರಣೀಯ ಸ್ವೀಕೃತಿ, ನಮ್ಮ ಅಸ್ತಿತ್ವದ ಶ್ರೇಷ್ಠ ಮಾನ್ಯತೆ ಎಂದು ಬಣ್ಣಿಸಿದರು.

ಭಾರತೀಯರು ಈಗ ಕೇವಲ ವಲಸೆವಾಸಿಗಳು ಅಲ್ಲ – ನಾವು ಅಮೆರಿಕದ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಸಮುದಾಯ. ಈ ದೀಪಾವಳಿ ಹಬ್ಬವು – ಫ್ಲೋರಿಡಾ ರಾಜಧಾನಿಯ ಉನ್ನತ ರಾಜ್ಯ ಸಾಂಸ್ಥಿಕ ಕೇಂದ್ರದಲ್ಲಿ ನಡೆದಿರುವುದು ನಮ್ಮ ಅಸ್ತಿತ್ವಕ್ಕೆ ದೊರೆತ ಘನತೆಯ ಸಂಕೇತವಾಗಿದೆ ಎಂದರು.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಶ್ರಿಗಂಧ ಕನ್ನಡ ಕೂಟದ ಚೆರ್ಮನ್​​ ಪದ್ಮನಾಭ ಬೇಡರಹಳ್ಳಿ, ಟ್ರಸ್ಟಿ ಗಂಗಾಧರ ಗಂಗಾ, ಉಪಾಧ್ಯಕ್ಷ ಹರ್ಷಿತ್ ಗೌಡ ಪ್ರಮುಖರಾದ ವೀಣಾ ಗೌಡ, ರೂಪಾ ಗಂಗಾಧರ, ನವನೀತಾ ಗೌಡ ಸೇರಿ ಸದಸ್ಯರು ಕನ್ನಡ ಸಮುದಾಯವನ್ನು ಗೌರವಪೂರ್ವಕವಾಗಿ ಪ್ರತಿನಿಧಿಸಿದರು. ಅಲ್ಲದೆ, ಫ್ಲೋರಿಡಾದ ಅನೇಕ ಭಾರತೀಯ ಸಂಘಟನೆಗಳು, ಶಾಸಕರು ಕೂಡ ಭಾಗವಹಿಸಿದ್ದರು.

ಈ ಬೆಳಕು ಎಲ್ಲೆಡೆ ಹರಡಲಿ,

ಸಮಾನತೆ ಮತ್ತು ಗೌರವದ ಬೆಳಕು ಆಗಲಿ,

ಭಾರತೀಯರ ಸಾಧನೆಗೆ ಪ್ರೇರಣೆ ನೀಡುವ ಬೆಳಕು ಆಗಲಿ!

ಎಲ್ಲರಿಗೂ ಹೃದಯಪೂರ್ವಕ ದೀಪಾವಳಿ ಹಬ್ಬದ ಶುಭಾಶಯಗಳು.. ಇದು ಕೇವಲ ಉತ್ಸವವಲ್ಲ, ಇದು ಒಂದು ಯುಗಚರಿತ್ರೆ!

— ಶ್ರಿಗಂಧ ಕನ್ನಡ ಕೂಟ