ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶನಿವಾರ ಜೀವಮಾನ ಸಾಧನೆಗಾಗಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅವರಿಗೆ ಡಾ.ದ.ರಾ.ಬೇಂದ್ರೆ ಕಾವ್ಯ ಪ್ರಶಸ್ತಿ ಹಾಗೂ ಎಸ್.ದಿವಾಕರ್ ಅವರಿಗೆ ಪ್ರೊ.ತೀ.ನಂ.ಶ್ರೀ ಸಾಹಿತ್ಯ ವಿಮರ್ಶೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಂ.ಎನ್.ಸುಂದರರಾಜ್, ಪ್ರೊ.ಎಂ.ಆಶಾಲತಾ, ಚ.ಹ.ರಘುನಾಥ್, ಪ್ರಜ್ಞಾ ಮತ್ತಿಹಳ್ಳಿ, ನಾಗಮಣಿ, ವಿನಯ್, ಮಾನಸಾ ಶಿವರಾಮಕೃಷ್ಣ, ಮೋಹನ ಶಾಸ್ತ್ರಿ, ವಾಗೀಶ, ಮುಂತಾದವರಿದ್ದರು 
ನ್ಯೂಸ್

ದಿವಾಕರ್ ಕನ್ನಡದ ಮುಖ್ಯ ಬರಹಗಾರರು: ರಘುನಾಥ್

ಶಿವಮೊಗ್ಗ: ಕನ್ನಡ ಸಾಹಿತ್ಯಕ್ಕೆ ಎಸ್.ದಿವಾಕರ್ ಅವರ ಕೊಡುಗೆ ಅಪಾರವಾಗಿದೆ. ವಿವಿಧ ಆಯಾಮಗಳಲ್ಲಿ ಅವರು ಮಾಡಿರುವ ಕೆಲಸ ಸಣ್ಣದಲ್ಲ. ಕನ್ನಡದ ಬಹುಮುಖ್ಯ ಬರಹಗಾರರ ಸಾಲಿನಲ್ಲಿ ಅವರಿದ್ದಾರೆ ಎಂದು ಅಂಕಣಕಾರ ಚ.ಹ.ರಘುನಾಥ್ ಅಭಿಪ್ರಾಯಪಟ್ಟರು.

ಜೀವಮಾನ ಸಾಧನೆಗಾಗಿ ಕರ್ನಾಟಕ ಸಂಘದಲ್ಲಿ ಎಸ್.ದಿವಾಕರ್ ಅವರಿಗೆ ಪ್ರೊ.ತೀ.ನಂ.ಶ್ರೀ ಸಾಹಿತ್ಯ ವಿಮರ್ಶೆ ಪ್ರಶಸ್ತಿ ಹಾಗೂ ಕವಯತ್ರಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅವರಿಗೆ ಡಾ.ದ.ರಾ.ಬೇಂದ್ರೆ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭದಲ್ಲಿ ದಿವಾಕರ್ ಕುರಿತು ಅವರು ಅಭಿನಂದನಾ ಭಾಷಣ ಮಾಡಿದರು.
ಕನ್ನಡದ ಮೇಷ್ಟ್ರು ಪರಂಪರೆ ಬಹಳ ದೊಡ್ಡದಿದೆ. ಸಾಹಿತ್ಯಕ್ಕೆ ಈ ಪರಂಪರೆ ನೀಡಿದ ಕೊಡುಗೆ ಅನನ್ಯ. ಸಮಾಜದಲ್ಲಿ ಅಭಿರುಚಿ ಬೆಳೆಸಿದ್ದು ಮೇಷ್ಟ್ರು ಪರಂಪರೆ. ಅದೇ ಕಾರ್ಯವನ್ನು ದಿವಾಕರ್ ಮುಂದುವರಿಸಿದ್ದಾರೆ. ಅವರ ವ್ಯಕ್ತಿತ್ವ ಅಪರೂಪದ್ದು. ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ, ಹೊಸತಲೆಮಾರಿಗೆ ನೀಡಿದ ಪ್ರೇರಣೆ, ಸಾಹಿತ್ಯಿಕ ಪ್ರಯೋಗ ಈ ಮೂರು ಸಂಗತಿ ದಿವಾಕರ್ ನೀಡಿರುವ ಅಪ್ರತಿಮ ಸಂಗತಿಗಳಾಗಿವೆ ಎಂದು ಹೇಳಿದರು.
ಚಿತ್ರಕಲೆ, ಸಂಗೀತದಲ್ಲಿ ಅವರಿಗೆ ಅಪಾರ ಜ್ಞಾನವಿದೆ. ಅವನ್ನು ಪತ್ರಿಕೋದ್ಯಮಕ್ಕೆ ತಂದವರು ಅವರು. ಮುಖಪುಟ ರಚಿಸುವ ಅವರ ಕಲೆ ವಿಶೇಷವಾದದ್ದು. ಸಾಹಿತಿಗಳನ್ನು, ಸಂಗೀತಗಾರರನ್ನು ಪತ್ರಿಕೆಯ ಮುಖಪಟ್ಟದಲ್ಲಿ ಪ್ರಕಟಿಸಬಹುದು ಎಂದು ಹೊಸಪ್ರಯೋಗವನ್ನು ಯಶಸ್ವಿಯಾಗಿ ಮಾಡಿದವರು ದಿವಾಕರ್ ಎಂದು ಬಣ್ಣಿಸಿದರು.
ಪ್ರೊ.ಮಾಲತಿ ಪಟ್ಟಣಶೆಟ್ಟಿ ಅವರ ಕುರಿತು ಅಭಿನಂದನಾ ಭಾಷಣ ಮಾಡಿದ ಸಹಪ್ರಾಧ್ಯಾಪಕಿ ಪ್ರಜ್ಞಾ ಮತ್ತಿಹಳ್ಳಿ, ಮಾಲತಿ ಅತ್ಯಂತ ಸಂವೇದನಾಶೀಲ ಕವಯತ್ರಿ. ಅವರೆಂದೂ ಪ್ರಶಸ್ತಿ ಪಡೆಯುವ ಬಗ್ಗೆ ಪ್ರಯತ್ನಿಸಿಸವರಲ್ಲ. ಅವರ ಕಾವ್ಯ ಕೃಷಿಯ ಸಮಗ್ರ ಜೀವನ ಚೈತನ್ಯವನ್ನು ಶಬ್ಧದಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್, ಗೌರವ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ ಮುಂತಾದವರಿದ್ದರು.