ನ್ಯೂಸ್

VIDEO| ಮಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ತಾಯಿ; ವಿಡಿಯೋ ಮಾಡುತ್ತ ಕುಳಿತ ತಂದೆ

ನವದೆಹಲಿ: ತಾಯಿ ಎಂದರೆ ಮಮತೆಯ ಆಗರ, ಕರುಣೆಯ ಕಡಲು, ಪ್ರೀತಿಯ ಸೆಲೆ ಹೀಗೆ ಹೇಳುತ್ತ ಹೊರಟರೆ ಆಕೆಯನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ತನ್ನ ಮಕ್ಕಳಿಗೆ ತಾಯಿ ನೀಡುವ ಅನನ್ಯ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ. ಆದರೆ, ಇಲ್ಲೊಬ್ಬ ತಾಯಿ ತಾನು ಹೆತ್ತ ಮಗುವನ್ನು ಮನಸೋಇಚ್ಛೆ ಥಳಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಘಟನೆಯು ಗುಜರಾತ್​​ನಲ್ಲಿ ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಮಗಳನ್ನು ಥಳಿಸುತ್ತಿರುವ ವಿಡಿಯೋವನ್ನು ಆಕೆಯ ತಂದೆಯೇ ಚಿತ್ರೀಕರಿಸಿದ್ದಾನೆ ಎಂದು ವರದಿಯಾಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಮಗಳನ್ನು ತಾಯಿ ಸೌಟಿನಿಂದ ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ಇದನ್ನು ವಿಡಿಯೋ ಮಾಡುತ್ತ ಸುಮ್ಮನೇ ಕುಳಿತಿರುವ ಆಕೆಯ ಪತಿ ಏನು ಹೇಳದೆ ಇರುವುದನ್ನು ನೋಡಬಹುದಾಗಿದೆ. ನೋವನ್ನು ತಾಳಲಾರದೆ ಮಗು ಜೋರಾಗಿ ಅಳುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ತಾಯಿ ಮಗುವಿನ ಕತ್ತು ಹಿಸುಕುವುದನ್ನು ನೋಡಬಹುದಾಗಿದೆ.

ಇತ್ತ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಹಲವರು ತಾಯಿಯ ನಡೆಗೆ ಕಿಡಿಕಾರಿದ್ದು, ವಿಡಿಯೋ ರೆಕಾರ್ಡ್​ ಮಾಡುತ್ತಿರುವವರು ಅದನ್ನು ನೋಡುತ್ತ ಯಾಕೆ ಸುಮ್ಮನೇ ಕುಳಿತಿದ್ದಾರೆ. ಬಿಡಿಸುವ ಬದಲು ಸುಮ್ಮನೇ ಕುಳಿತಿರುವವರನ್ನು ಮನುಷ್ಯರು ಎಂದು ಹೇಳುವುದಿಲ್ಲ. ಕೂಡಲೇ ಪೊಲೀಸರು ಇವರುಗಲ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.