ಕೊಪ್ಪಳ: ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಕೊಪ್ಪಳ ಜಿಲ್ಲಾ ರಸಗೊಬ್ಬರ, ಕ್ರಿಮಿನಾಶಕ ಮತ್ತು ಬೀಜ ಮಾರಾಟಗಾರರ ಸಂದ ಪದಾಧಿಕಾರಿಗಳು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್.ಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆ ಕೊರತೆಯಾಗುತ್ತಿದೆ. ಇದರಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಜಿಲ್ಲೆಗೆ ಪೂರೈಕೆ ಆಗುವ ರಸಗೊಬ್ಬರವನ್ನು ನೆರೆ ಜಿಲ್ಲೆಗಳಾದ ಗದಗ, ಬಳ್ಳಾರಿ, ವಿಜಯನಗರ ಮತ್ತು ರಾಯಚೂರು ಜಿಲ್ಲೆಗಳ ಅಧಿಕಾರಿಗಳು ಪಡೆಯುತ್ತಿದ್ದಾರೆ. ಇದರಿಂದ ಶೇ.50ರಷ್ಟು ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಆದರೆ, ಅನ್ಯ ಜಿಲ್ಲೆಗೆ ಪೂರೈಕೆ ಆಗುವ ರಸಗೊಬ್ಬರ ಕೊಪ್ಪಳಕ್ಕೆ ಬರುತ್ತಿಲ್ಲ. ಅಲ್ಲಿನ ಅಧಿಕಾರಿಗಳು ತಮ್ಮ ಜಿಲ್ಲೆಗೆ ಪೂರೈಕೆ ಆಗುವ ರಸಗೊಬ್ಬರ ಅನ್ಯ ಜಿಲ್ಲೆಗೆ ನೀಡುವುದಕ್ಕೆ ಅಡ್ಡಿಪಡಿಸುತ್ತಾರೆ. ನಮಗೆ ತೊಂದರೆಯಾಗುತ್ತಿದೆ. ರಸಗೊಬ್ಬರಕ್ಕೆ ಸಲ್ಲಿಸಿದ ಬೇಡಿಕೆಯ ಅರ್ಧದಷ್ಟು ಡೀಲರ್ಗಳಿಂದ ಪೂರೈಕೆಯಾಗುತ್ತಿದೆ ಎಂದು ಆರೋಪಿಸಿದರು.
ತಕ್ಷಣ ಸಮಸ್ಯೆಗೆ ಪರಿಹಾರ ನೀಡಬೇಕು. ಜಿಲ್ಲೆಗೆ ಬೇಡಿಕೆಯಷ್ಟು ರಸಗೊಬ್ಬರ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಅನ್ಯ ಜಿಲ್ಲೆಗೆ ರಸಗೊಬ್ಬರ ಹಂಚಿಕೆ ತಡೆಯಬೇಕು. ಬೇಡಿಕೆ ಸಲ್ಲಿಸಿದಷ್ಟು ಗೊಬ್ಬರ ಪೂರೈಕೆ ಆಗುವಂತೆ ಕ್ರಮವಹಿಸಲು ಆಗ್ರಹಿಸಿದರು. ಸಂದ ಅಧ್ಯಕ್ಷ ಎಂ.ಶ್ರೀಕಾಂತ, ಕಾರ್ಯದರ್ಶಿ ಸತ್ಯನಾರಾಯಣ ಡಿ.ವಿ., ಉಪಾಧ್ಯಕ್ಷ ರಾಮಕೃಷ್ಣ, ರಿತೇಶ ಇತರರಿದ್ದರು.