ನ್ಯೂಸ್

ಸಾಹಿತಿಗಳಿಗೆ ಪ್ರೋತ್ಸಾಹ ಅಗತ್ಯ

ಕೊಪ್ಪಳ: ಸಾಹಿತಿಗಳಿಗೆ ಪ್ರೋತ್ಸಾಹ ಅಗತ್ಯ ಎಂದು ವಿಜಯನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್​ ಅಧ್ಯಕ್ಷ ಹಾಲ್ಯಾ ನಾಯಕ ಹೇಳಿದರು.

ನಗರದ ನೌಕರ ಭವನದಲ್ಲಿ ಸಿರಿಗನ್ನಡ ವೇದಿಕೆ ಹಾಗೂ ವಿವಿಧ ಪ್ರಕಾಶನಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ರಂಗನಾಥ ಯ. ಅಕ್ಕಸಾಲಿಗರ ಅವರ 'ಅವ್ವನ ಬುತ್ತಿ' ಕವನ ಸಂಕಲನ ಲೋಕಾರ್ಪಣೆ ಹಾಗೂ ರನ್ನದಿವಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸಾಹಿತಿ ಆದರ್ಶ ಬದುಕಿನ ಕುರಿತು ಬರೆಯಲಿ. ಸಮಾಜದ ವಿವಿಧ ಮಜಲು ಅರಿತು ಬರವಣಿಗೆಗಿಳಿಸಲಿ. ಯುವ ಸಾಹಿತಿಗಳಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.

ಪ್ರಾಧ್ಯಾಪಕ ಶರಣಬಸಪ್ಪ ಬಿಳೆಎಲಿ ಕವನ ಸಂಕಲನ ಪರಿಚಯಿಸಿ ಮಾತನಾಡಿ, ಅವ್ವನ ತ್ಯಾಗವನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅವ್ವನ ಬುತ್ತಿಯಲ್ಲಿ ತ್ಯಾಗ , ಪ್ರೀತಿ, ಕಕ್ಕುಲಾತಿ ಹಾಗೂ ನಿಸ್ವಾರ್ಥವಿದೆ. ಅವ್ವನ ಬುತ್ತಿಯ ರುಚಿ ಜಗತ್ತಿನ ಯಾವ ಪಂಚತಾರಾ ಹೋಟೆಲ್​ಗಳಲ್ಲಿಯೂ ಇರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿ ಡಿ.ಎಂ.ಬಡಿಗೇರ ಮಾತನಾಡಿ, ಅವ್ವ ಎಂದರೆ ಬೆಳಕು. ಅವ್ವ ಎಂದರೆ ಬದುಕು. ಅವ್ವ ಎಂದರೆ ಸರ್ವಸ್ವ. ಕವನ ಸಂಕಲನದ ಶೀರ್ಷಿಕೆಯೆ ವಿಶೇಷ ಅವ್ವನ ಬುತ್ತಿಯ ಸರಣಿಗಳು ಹೊರಬರಲಿ ಎಂದರು.

ನ್ಯಾಯವಾದಿ ಐ.ವಿ.ಪತ್ತಾರ, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಪೊಲೀಸ್​ ಪಾಟೀಲ್​, ಪತ್ರಕರ್ತ ಜಿ.ಎಸ್​.ಗೋನಾಳ ಮಾತನಾಡಿದರು. ವಿವಿಧ ಗಣ್ಯರಿಗೆ ರತ್ನ ದೀವಿಗೆ ಪ್ರಶಸ್ನಿ ನೀಡಿ ಗೌರವಿಸಲಾಯಿತು.

ಪ್ರಮುಖರಾದ ಗುರುರಾಜ ಅಗಳಿ, ಶಾರದಾ ಶ್ರಾವಣಸಿಂಗ್​, ಸಿದ್ಲಿಂಗಪ್ಪ ಕೊಟ್ನೇಕಲ್​, ಮಹೇಶ ಬಳ್ಳಾರಿ, ಸುನಿತಾ ವಾದಿರಾಜ, ಮಂಜುನಾಥ ಚಿತ್ರಗಾರ ಇತರರಿದ್ದರು.