ಶಿವಾನಂದ ಕುಗ್ವೆ 
ನ್ಯೂಸ್

ಎನ್‌ಡಿಎಸ್ ನೆನಪಿನಲ್ಲಿ ಜಿಲ್ಲಾ ರೈತ ಸಮಾವೇಶ

ಸಾಗರ: ರೈತ ನಾಯಕ ಎನ್.ಡಿ.ಸುಂದರೇಶ್ ನೆನಪಿನಲ್ಲಿ ರಾಜ್ಯ ರೈತ ಸಂಘದಿಂದ ಜಿಲ್ಲಾ ರೈತ ಸಮಾವೇಶವನ್ನು ಡಿ.21ರಂದು ಬೆಳಗ್ಗೆ 11ಕ್ಕೆ ಸರ್ಕಾರಿ ನೌಕರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ತಿಳಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಿಗಂದೂರು ಧರ್ಮದರ್ಶಿ ಡಾ. ರಾಮಪ್ಪ ಸಮಾವೇಶವನ್ನು ಉದ್ಘಾಟಿಸುವರು. ರೈತ ಚಳವಳಿಯ ಹಸಿರು ಹೊತ್ತಗೆಯನ್ನು ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಬಿಡುಗಡೆ ಮಾಡುವರು. ಆನ್‌ಲೈನ್ ಮೂಲಕ ಸದಸ್ವತ್ವ ಅಭಿಯಾನವನ್ನು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ದರ್ಶನ್ ಪುಟ್ಟಣ್ಣಯ್ಯ ಪಾಲ್ಗೊಳ್ಳುವರು. ತಾಲೂಕು ಅಧ್ಯಕ್ಷ ಸುಂದರೇಶ್ ಅಧ್ಯಕ್ಷತೆ ವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೈತ ಚಳವಳಿಗೆ ಎನ್.ಡಿ.ಸುಂದರೇಶ್ ನೀಡಿದ ಕೊಡುಗೆ ಅವಿಸ್ಮರಣೀಯ. ಅವರ ಸ್ಮರಣಾರ್ಥ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಅಗತ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಕಿಂಚಿತ್ತೂ ಸ್ಪಂದಿಸುತ್ತಿಲ್ಲ. ಶರಾವತಿ ಸಂತ್ರಸ್ತರು, ಬಗರ್‌ಹುಕುಂ, ಅರಣ್ಯಹಕ್ಕು ಕಾಯ್ದೆ ಅನುಷ್ಠಾನ ಹೀಗೆ ಅನೇಕ ಸಮಸ್ಯೆಗಳು ರೈತರ ಬದುಕಿಗೆ ಶಾಪವಾಗಿದೆ. ಜತೆಗೆ ಪರಿಭಾವಿತ ಅರಣ್ಯ, ಪರಿಸರ ಸೂಕ್ಷ್ಮ ವಲಯ, ಸಿಂಗಳೀಕ ಅಭಯಾರಣ್ಯ, ಸಂರಕ್ಷಿತ ಅರಣ್ಯದ ಹೆಸರಿನಲ್ಲಿ ಅರಣ್ಯ ಇಲಾಖೆ ರೈತರ ಬದುಕಿನ ಹಕ್ಕು ಕಸಿದುಕೊಳ್ಳುತ್ತಿದೆ. ಅತಿವೃಷ್ಟಿ, ಅಕಾಲಿಕ ಮಳೆಯಿಂದ ರೈತರು ಫಸಲು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸಮಾವೇಶದ ಮೂಲಕ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತಕುಮಾರ್ ಮಾತನಾಡಿ, ಸಮಾವೇಶದಲ್ಲಿ ರೈತಪರ ಕೈಗೊಂಡ ನಿರ್ಣಯವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸಲಾಗುತ್ತದೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಕ್ಷಾತೀತವಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸುಂದರ್‌ಸಿಂಗ್, ಯು.ಪಿ.ಜೋಸೆಫ್, ಬಸವರಾಜ ಗೌಡ, ಜಯಲಕ್ಷ್ಮೀ ನೇದರವಳ್ಳಿ, ರಮೇಶ್ ಐಗಿನಬೈಲು, ಸತೀಶ್ ಅಂಗಡಿ ಇತರರಿದ್ದರು.