ಚಾಮರಾಜನಗರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳಿಗೆ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕಪ್ಪುಕೋಟು ಕೊಡುಗೆಯಾಗಿ ನೀಡಿದ್ದು, ಇದನ್ನು ವಿದ್ಯಾರ್ಥಿಗಳಿಗೆ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ವಿತರಿಸಿದರು. ರವಿಕುಮಾರ್, ಲಲಿತಾ ಬಾಯಿ, ಗೌಡಹಳ್ಳಿ ರಾಜೇಶ್, ನಗು ಮೋಹನ್, ಅಕ್ಷಯ್, ನಿಶ್ಚಿತ್ ಕುಮಾರ್ ಇದ್ದರು.
- ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಅಭಿಮತ
- ಕಾನೂನು ಕಾಲೇಜು ವಿದ್ಯಾರ್ಥಿಗಳಿಗೆ ಶಾಸಕ ದರ್ಶನ್ ಕಪ್ಪು ಕೋಟು ಕೊಡುಗೆ
ಚಾಮರಾಜನಗರ: ಜಿಲ್ಲೆಯ ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳಿಗೆ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕಪ್ಪು ಕೋಟು ಕೊಡುಗೆ ನೀಡಿದ್ದು, ಇದನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಸಂಸದರಾಗಿದ್ದ ದಿ.ಆರ್. ಧ್ರುವನಾರಾಯಣ್ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದರು. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯನ್ನು ಅಭಿವೃದ್ದಿಪಡಿಸಬೇಕೆಂಬ ಹಂಬಲದೊಂದಿಗೆ ಮೆಡಿಕಲ್ ಕಾಲೇಜು, ಕೇಂದ್ರಿಯ ವಿದ್ಯಾಲಯ, ಕೃಷಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಏಕಲವ್ಯ ಶಾಲೆ ಸೇರಿದಂತೆ ಅನೇಕ ವಸತಿ ಶಾಲೆಯನ್ನು ಜಿಲ್ಲೆಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದರೊಂದಿಗೆ ದಿ. ಎಚ್.ಎಸ್. ಮಹದೇವಪ್ರಸಾದ್ ಅವರು ಕೊಡುಗೆಯೂ ಇದೆ. ಇವರಿಬ್ಬರು ಜಿಲ್ಲೆಯ ಅಭಿವೃದ್ಧಿಗಾಗಿ ಜೋಡೆತ್ತಿದಂತೆ ದುಡಿಯುತ್ತಿದ್ದರು. ಇವರ ಮಕ್ಕಳಾದ ದರ್ಶನ್ ಮತ್ತು ಗಣೇಶ್‌ಪ್ರಸಾದ್ ಶಾಸಕರಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ಸಂಸದರಾಗಿದ್ದ ಧ್ರುವನಾರಾಯಣ್ ಅವರಿಗೆ ಜಿಲ್ಲೆಯಲ್ಲಿ ಕಾನೂನು ಕಾಲೇಜು ಆರಂಭಿಸಬೇಕೆಂಬ ಕನಸು ಇತ್ತು. ಇದನ್ನು ನೆನಸಲು ಮಾಡಲು ಅವರು ಮಾಡಿದ ಪ್ರಯತ್ನಗಳು ಹಲವು. ಬೀದರ್‌ಗೆ ಮಂಜೂರು ಆಗಿದ್ದ ಕಾನೂನು ಕಾಲೇಜನ್ನು ಚಾ.ನಗರಕ್ಕೆ ತಂದದ್ದೇ ಅದ್ಭುತ. ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾನೂನು ಸಚಿವರಾಗಿದ್ದ ಜಯಚಂದ್ರ ಅವರ ಮುಖಾಂತರ ಜಿಲ್ಲೆಯಲ್ಲಿ ಕಾಲೇಜಿಗೆ ಅಗತ್ಯವಾದ ಎಲ್ಲಾ ಮೂಲ ಸೌಲಭ್ಯವನ್ನು ಕಲ್ಪಿಸಿಕೊಡುವ ಭರಸವೆಯೊಂದೇ ಕಾಲೇಜು ಆರಂಭಕ್ಕೆ ಅನುಮತಿ ಪಡೆದುಕೊಂಡು ಬಂದರು. ನಂತರ ದಿನಗಳಲ್ಲಿ ಶಾಸಕ ಪುಟ್ಟರಂಗಶೆಟ್ಟರು, ಸಂಸದರಾದ ಸುನೀಲ್ ಬೋಸ್ ಅವರುಗಳ ಪ್ರಯತ್ನದಿಂದ ಕಾಲೇಜು ಆರಂಭವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಲಲಿತಾ ಬಾಯಿ, ಜಿಲ್ಲಾ ಕಾಂಗ್ರೆಸ್ ಮಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್, ಎನ್‌ಎಸ್‌ಯುಐನ ಅಧ್ಯಕ್ಷ ನಗು ಮೋಹನ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಕ್ಷಯ್, ವಿದ್ಯಾರ್ಥಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಿತ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಇದ್ದರು.