ತರೀಕೆರೆ ಶಾಸಕರ ಜನಸಂಪರ್ಕ ಕಚೇರಿ ಆವರಣದಲ್ಲಿ 5ನೇ ಜಿಲ್ಲಾ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಬಿಡುಗಡೆಗೊಳಿಸಿದರು. ಜಿ.ಬಿ.ಸುರೇಶ್, ಮಾಳೇನಹಳ್ಳಿ ಡಾ. ಬಸಪ್ಪ, ಕರಿಬಸಪ್ಪ, ಆರ್.ನಾಗೇಶ್, ಅಣ್ಣಯ್ಯ ಇತರರಿದ್ದರು. 
ನ್ಯೂಸ್

ಕಲ್ಲೇನಹಳ್ಳಿಯಲ್ಲಿ 5ನೇ ಜಿಲ್ಲಾ ಜಾನಪದ ಸಮ್ಮೇಳನ

ಜಿ. ಗಜೇಂದ್ರ

ತರೀಕೆರೆ: ಜಾನಪದ ತಜ್ಞ ದಿ.ಕೆ.ಆರ್.ಲಿಂಗಪ್ಪ ಅವರ ಹುಟ್ಟೂರು ಕಲ್ಲೇನಹಳ್ಳಿಯಲ್ಲಿ 5ನೇ ಜಿಲ್ಲಾ ಜಾನಪದ ಸಮ್ಮೇಳನ ಆಯೋಜಿಸುತ್ತಿರುವುದು ಅರ್ಥಪೂರ್ಣ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಅಜ್ಜಂಪುರ ತಾಲೂಕು ಕಲ್ಲೇನಹಳ್ಳಿಯಲ್ಲಿ ಅ.13ರಂದು ನಡೆಸಲು ಉದ್ದೇಶಿಸಿರುವ 5ನೇ ಜಿಲ್ಲಾ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಜಾನಪದ ಕಲೆಗಳ ತವರೂರಾದ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಲ್ಲಿ ಹಲವು ಪ್ರಾಕಾರದ ಕಲೆಗಳು ಜನ್ಮತಾಳಿವೆ. ಅನೇಕ ಕಲಾವಿದರು ಇದರ ಬೆಳವಣಿಗೆಗೆ ಶ್ರಮಿಸಿದ್ದು ಮುಂದಿನ ಪೀಳಿಗೆ ಮೇಲೆ ಈ ಕಲೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇದೆ ಎಂದರು.
ಜಾನಪದ ಕ್ಷೇತ್ರಕ್ಕೆ ಜಾನಪದ ತಜ್ಞ ಕೆ.ಆರ್.ಲಿಂಗಪ್ಪ ಅನನ್ಯ ಕೊಡುಗೆ ನೀಡಿದ್ದು, ಅವರ ಸ್ಮರಣಾರ್ಥ ಅವರದ್ದೇ ಹುಟ್ಟೂರಿನಲ್ಲಿ ಜಿಲ್ಲಾ ಸಮ್ಮೇಳನ ಆಯೋಜಿಸುತ್ತಿರುವುದು ಅವರಿಗೆ ನಾಡು ಸಲ್ಲಿಸುವ ಗೌರವವಾಗಿದೆ. ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, 5ನೇ ಜಿಲ್ಲಾ ಜಾನಪದ ಸಮ್ಮೇಳನ ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮ್ಮೇಳನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮತ್ತೊಬ್ಬ ಜಾನಪದ ತಜ್ಞ ಗೋ.ರು.ಚನ್ನಬಸಪ್ಪ, ಜಾನಪದ ಲೋಕದ ಅಧ್ಯಕ್ಷ ಪ್ರೊ. ಹೀ.ಚಿ.ಬೋರಲಿಂಗಯ್ಯ ಅವರನ್ನು ಆಹ್ವಾನಿಸಲಾಗಿದೆ. ಜಾನಪದ ವಿದ್ವಾಂಸ ಚಟ್ನಳ್ಳಿ ಮಹೇಶ್, ಡಾ. ಬಸವರಾಜ ನೆಲ್ಲಿಸರ, ಜಿಲ್ಲಾ ಜಾನಪದ ಪರಿಷತ್ ಗೌರವಾಧ್ಯಕ್ಷ ಡಾ. ಜೆ.ಪಿ.ಕೃಷ್ಣಗೌಡ ಸೇರಿ ಜಿಲ್ಲೆಯ ಎಲ್ಲ ಜಾನಪದ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಪಟ ಕುಣಿತ, ಕೋಲಾಟ, ಜಾನಪದ ನೃತ್ಯ, ಸೋಮನ ಕುಣಿತ, ಗಾರುಡಿ ಗೊಂಬೆ, ಚಿಟ್ಟಿ ಮೇಳ, ಆಸಾದಿ ಕುಣಿತ, ಸುಗ್ಗಿ ಕುಣಿತ, ಕೀಲು ಕುದುರೆ ಸಮ್ಮೇಳನಕ್ಕೆ ರಂಗು ನೀಡಲಿವೆ. ಸಮ್ಮೇಳನದಲ್ಲಿ ಹಿರಿಯ ಕಲಾವಿದರನ್ನು ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಆರ್.ನಾಗೇಶ್ ಮಾತನಾಡಿ, ಸಮ್ಮೇಳನಾಧ್ಯಕ್ಷರನ್ನು ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಅಂದು ಬೆಳಗ್ಗೆ 9ಕ್ಕೆ ಆರಂಭಗೊಳ್ಳುವ ಮೆರವಣಿಗೆಯಲ್ಲಿ ಜಿಲ್ಲೆಯ ಎಲ್ಲ ಕಲಾವಿದರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಜಾನಪದಶ್ರೀ ಪ್ರಶಸ್ತಿ ಪುರಸ್ಕೃತ ಮಾಳೇನಹಳ್ಳಿ ಡಾ. ಬಸಪ್ಪ, ಸಮ್ಮೇಳನದ ಅಧ್ಯಕ್ಷ ಕರಿಬಸಪ್ಪ, ಸಂಚಾಲಕ ಅಣ್ಣಯ್ಯ, ಸ್ವಾಗತ ಸಮಿತಿ ಸದಸ್ಯರಾದ ಕಾರೇಹಳ್ಳಿ ಬಸಪ್ಪ, ಕಾಂತರಾಜು, ಗ್ರಾಪಂ ಅಧ್ಯಕ್ಷ ತಿಪ್ಪೇಶ, ಸದಸ್ಯೆ ಪುಷ್ಪಾ, ಶಿಕ್ಷಕ ಬಸವರಾಜಪ್ಪ, ಕಲಾವಿದರಾದ ಗಂಗಣ್ಣ, ಗಂಗಾಧರಪ್ಪ ಇತರರಿದ್ದರು.