ಶೃಂಗೇರಿ: ಅಯೋಧ್ಯೆ ಶ್ರೀರಾಮ ಮಂದಿರದ ತೀರ್ಥ ಪ್ರಸಾದ ಬುಧವಾರ ಶೃಂಗೇರಿ ಶಾರದಾಂಬಾ ದೇವಸ್ಥಾನವನ್ನು ತಲುಪಿತು. ವಾರಾಣಸಿ ಮೂಲದ ಸಪ್ತನದಿ ಜಲ ಸಂಗ್ರಹ ಕುಂಭವನ್ನು ಅಯೋಧ್ಯೆ ಯಾತ್ರೆ ಸಮಿತಿ ಪದಾಧಿಕಾರಿಗಳು ಶ್ರೀ ಶಾರದೆ ಸನ್ನಿಧಿಗೆ ತಂದರು.
ತೀರ್ಥ ಪ್ರಸಾದವನ್ನು ಕಾಶ್ಮೀರದ ಗಡಿಯಲ್ಲಿರುವ ನಂದಲಾಲ್‌ಜೀ ಆಶ್ರಮದ ಗುರುಮೋಹನ್ ಕಿಶನ್ ಮೊಂಘಾ ನೇತೃತ್ವದಲ್ಲಿ ಜಗನ್ಮಾತೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಜಲತೀರ್ಥದ ಕುಂಡವನ್ನು ಭಕ್ತರಿಗೆ ನೀಡಲು ಸಮಿತಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಶರ್ಮ ಅವರಿಗೆ ಗುರುಮೋಹನ್ ಕಿಶನ್ ಮೊಂಘಾ ಅವರು ಹಸ್ತಾಂತರಿಸಿದರು. ಶ್ರೀಮಠದ ಆವರಣದಲ್ಲಿ ಭಕ್ತರಿಗೆ ತೀರ್ಥವನ್ನು ವಿತರಿಸಲಾಯಿತು.
ಮಂಜುನಾಥ ಶರ್ಮ ಮಾತನಾಡಿ, ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ಏಳು ನದಿಗಳು ಪವಿತ್ರ. ಇವುಗಳಲ್ಲಿ ಐದು ನದಿಗಳು ಭಾರತ ದೇಶದಲ್ಲಿವೆ. ಸರಸ್ವತಿ ಮತ್ತು ಸಿಂಧೂ ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಹುಟ್ಟಿ ಅದೇ ಭಾಗದಲ್ಲಿ ಹರಿಯುತ್ತವೆ. ಹಾಗಾಗಿ ಜಲಾಭಿಷೇಕಕ್ಕೆ ಎರಡು ನದಿಗಳ ನೀರು ಪ್ರಾಮುಖ್ಯ. ನೀಲಂ ಕಣಿವೆಯ ಶಾರದಾ ಗ್ರಾಮದಲ್ಲಿ ಲಭ್ಯವಿರುವ ಎರಡು ನದಿಗಳ ನೀರಿನ ಜತೆಗೆ ಅದೇ ಪ್ರದೇಶದ ಪಾರ್ವತಿ ಮತ್ತು ನಾರದ ಘಾಟಿಯಲ್ಲಿ ಹರಿಯುವ ಮಧುಮತಿ, ಕಿಶನ್‌ಗಂಗಾ ನದಿಗಳ ಜಲ ಸಂಗ್ರಹಿಸಲಾಗಿದೆ ಎಂದರು.
ಭಾರತ ಮೂಲದ ಶಾರದಾ ಸರ್ವಜ್ಞ ಪೀಠ ರಕ್ಷಣಾ ಸಮಿತಿಯು ಪಿಒಕೆಯ ಮುಸ್ಲಿಮರ ಮೂಲಕ ಸಂಗ್ರಹಿಸಿ ಮುಂಬೈಗೆ ತರಿಸಲಾಗಿದೆ. ಕಳೆದ ತಿಂಗಳು ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ, ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಅನುಗ್ರಹ ಪಡೆದು, ಅವರ ಆಶಯದಂತೆ ಯಾತ್ರೆ ಮೂಲಕ ಅಯೋಧ್ಯೆ ತಲುಪಿಸಿದ್ದೇವೆ. ಅಲ್ಲಿ ಬಳಸಿದ ಜಲವನ್ನು ಮತ್ತೆ ಸಂಗ್ರಹಿಸಿ ಶೃಂಗೇರಿಗೆ ತರಲಾಗಿದೆ ಎಂದು ಹೇಳಿದರು.
ಗುರುಮೋಹನ್ ಕಿಶನ್ ಮೊಂಘಾ ಮಾತನಾಡಿ, ಜಲಭರಿತ ಕುಂಭವನ್ನು ಭಾರತದ ಎಲ್ಲ ಜ್ಯೋತಿರ್ಲಿಂಗ, ಶಕ್ತಿಪೀಠಗಳಿಗೆ ಒಯ್ಯಲಾಗುತ್ತಿದೆ. ಅಲ್ಲಿ ಬರುವ ಭಕ್ತರಿಗೆ ಶ್ರೀರಾಮ ತೀರ್ಥವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಕರ್ನಾಟಕದಲ್ಲಿ ಆಗಮತ್ರಯ ಆಗಮಿಕ ಅರ್ಚಕರ ಮಹಾಮಂಡಲ, ಮುಜರಾಯಿ ಇಲಾಖೆ, ಅರ್ಚಕರ ಸಂಘ ಮುಂತಾದ ಸಂಘಟನೆಗಳಿಗೆ ನೀಡುವ ಉದ್ದೇಶ ನಮ್ಮದು.
ಸಮಿತಿಯ ಬೆಂಗಳೂರು ಘಟಕದ ಅಧ್ಯಕ್ಷ ಚಂಪಾಲಾಲ್, ಪದಾಧಿಕಾರಿಗಳಾದ ರವೀಂದ್ರ ಕಣಕಟ್ಟೆ, ಆದರ್ಶ, ಸರಸ್ವತಿ, ಜಯಲಕ್ಷ್ಮೀ ಇದ್ದರು.