ಬೀರೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ಮಂಗಳವಾರ ಬೀರೂರಿನ ಗುರು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಅಂಗವಿಕಲ ಮಕ್ಕಳಿಗೆ ಗಾಲಿಕುರ್ಚಿ ಮತ್ತು ಶ್ರವಣ ಯಂತ್ರವನ್ನು ಶಾಸಕ ಕೆ.ಎಸ್.ಆನಂದ್ ವಿತರಿಸಿದರು.
ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಯ 27 ವಿದ್ಯಾರ್ಥಿಗಳಿಗೆ ಸಮನ್ವಯ ಸಮಿತಿ ಮೇಲ್ವಿಚಾರಣೆಯಲ್ಲಿ ವೈದ್ಯರ ದೃಢೀಕರಣದ ಮೇರೆಗೆ ಈ ಸೌಲಭ್ಯ ದೊರೆಯಲಿದೆ ಎಂದರು.
ವಲಯ ಅಂಗವಿಕಲ ಮಕ್ಕಳ ಸಂಪನ್ಮೂಲ ವ್ಯಕ್ತಿ ರೇಣುಕಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದುವ ಇಂತಹ ಮಕ್ಕಳಿಗೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ನಡೆಸಿ ವೈದ್ಯರ ಸಲಹೆ ಮತ್ತು ವೈಕಲ್ಯದ ಶೇಕಡಾವರು ಅನುಪಾತದಲ್ಲಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ತಮ್ಮ ಶಾಲೆಗಳಲ್ಲಿ ಇರಬಹುದಾದ ಅಂಗವಿಕಲ ಮಕ್ಕಳ ಮಾಹಿತಿಯನ್ನು ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಂಗವಾಗಿರುವ ಈ ಶಾಖೆಗೆ ನೀಡಿದ್ದಲ್ಲಿ ಅವರ ಶೈಕ್ಷಣಿಕ ಬದುಕನ್ನು ಹಸನಾಗಿಸಲು ಲಭ್ಯವಿರುವ ಪರಿಕರಗಳನ್ನು ಒದಗಿಸಲಾಗುವುದು ಎಂದರು.
ಬಿಇಒಗಳಾದ ಎಚ್.ಗಂಗಾಧರ್, ಸಿದ್ದರಾಜು ನಾಯ್ಕ ಮತ್ತು ಶಿಕ್ಷಣ ಇಲಾಖೆ ಅಕಾರಿಗಳು ಇದ್ದರು.