ನ್ಯೂಸ್

ತಿಂಗಳಲ್ಲಿ 12 ಸಾವಿರ ಮನೆ ಹಂಚಿಕೆ: ಸಚಿವ ಜಮೀರ್ ಅಹಮದ್

ಬೆಂಗಳೂರು: ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ರಾಜ್ಯದೆಲ್ಲೆಡೆ ಕೈಗೆತ್ತಿ ಕೊಂಡಿರುವ ವಸತಿ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ವಸತಿ ಸಚಿವ ಜಮೀರ್ ಅಹಮದ್ ಖಾನ್ ಗಡುವು ನೀಡಿದ್ದಾರೆ.

ನಗರದ ಕಾವೇರಿ ಭವನದಲ್ಲಿರುವ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಿಗಮದಿಂದ 47,882 ಕುಟುಂಬಗಳಿಗೆ ಸೂರು ಕಲ್ಪಿಸುವ 42 ಯೋಜನೆ ಕೈಗೆತ್ತಿಕೊಂಡಿದ್ದರೂ 4,665 ಮನೆ ಮಾತ್ರ ಪೂರ್ಣಗೊಳಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾಲಮಿತಿ ನಿಗದಿ ಮಾಡಿಕೊಂಡು ಆದಷ್ಟು ಶೀಘ್ರ ಯೋಜನೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ರಾಜ್ಯದೆಲ್ಲೆಡೆ ಕೈಗೊಂಡಿರುವ ಪ್ರತಿ ಯೋಜನೆಯು ಪ್ರಸ್ತುತ ಯಾವ ಹಂತದಲ್ಲಿದೆ ಎಂಬ ಕುರಿತು ವರದಿ ಸಲ್ಲಿಸಿ, ಅನುದಾನ ಕೊರತೆ ಅಥವಾ ಬೇರೆ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ವರದಿಯಲ್ಲಿ ಸೇರಿಸುವಂತೆ ಸೂಚನೆ ನೀಡಿದರು.

ನಿಗಮದ ವಸತಿ ಯೋಜನೆಗಳಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ಮಾಡಿರುವ ಪ್ರಮಾಣಕ್ಕಿಂತ ಹೆಚ್ಚಾಗಿ ಹಣ ಬಿಡುಗಡೆ ಮಾಡಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಹಂತ ಹಂತವಾಗಿ ಹಣ ಬಿಡುಗಡೆ ಮಾಡದೆ ಕೆಲಸ ಪೂರ್ತಿ ಮಾಡದಿದ್ದರೂ, ಯಾವ ಕಾರಣಕ್ಕೆ ಪಾವತಿ ಮಾಡಲಾಗಿದೆ ಎಂದು ಸಚಿವರು ಪ್ರೆಶ್ನೆ ಮಾಡಿದರು.

ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ರೀತಿ ಮಾಡುವಂತಿಲ್ಲ. ಜತೆಗೆ ಫಲಾನುಭವಿಗಳ ವಂತಿಗೆ ಪಡೆಯದೆ, ಬ್ಯಾಂಕ್ ಸಾಲದ ಖಾತರಿ ದೊರಕದೆ ಹಂಚಿಕೆ ಪತ್ರ ನೀಡುವಂತಿಲ್ಲ ಎಂದು ಸೂಚಿಸಿದರು.

ಲಕ್ಷ ಮನೆ ಯೋಜನೆ ಬಗ್ಗೆ ಬೇಸರ:

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಒಂದು ಲಕ್ಷ ಮನೆ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಬಗ್ಗೆಯೂ ಬೇಸರ ವ್ಯಕ್ತ ಪಡಿಸಿದ ಸಚಿವರು, ಕಾಲಮಿತಿಯಲ್ಲಿ ಮನೆಗನ್ನು ನಿರ್ಮಿಸಿಕೊಡದಿದ್ದರೆ ಜನರಲ್ಲಿ ವಿಶ್ವಾಸ ಬರಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಒಂದು ತಿಂಗಳಲ್ಲಿ 12 ಸಾವಿರ ಮನೆ ಹಂಚಿಕೆಗೆ ಕ್ರಮ ವಹಿಸಬೇಕು. ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವ್ಯವಸ್ಥೆ ಮಾಡಿಸಿ ಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಕೀ ಹಸ್ತಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಸಚಿವರು ಸೂಚಿಸಿದರು.

ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಸುಶೀಲಮ್ಮ ಕೆಎಚ್‌ಬಿ ಆಯುಕ್ತೆ ಕವಿತಾ ಮನ್ನೀಕೇರಿ ಮತ್ತಿತರರಿದ್ದರು.