ನ್ಯೂಸ್

ಕೋರ್ಟ್ ಕಲಾಪಗಳಲ್ಲಿ ವ್ಯತ್ಯಯ

ಬೆಂಗಳೂರು: ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ವಿರೋಧಿಸಿ ವಕೀಲರು ನ್ಯಾಯಾಲಯಗಳ ಕಲಾಪ ಬಹಿಷ್ಕರಿಸಿದ್ದರಿಂದ ಬುಧವಾರ ಹೈಕೋರ್ಟ್ ಸೇರಿದಂತೆ ಬಹುತೇಕ ಕೋರ್ಟ್ ಕಲಾಪಗಳಲ್ಲಿ ವ್ಯತ್ಯಯ ಉಂಟಾಯಿತು.

ವಕೀಲರು ಹೈಕೋರ್ಟ್‌ನ ಎಲ್ಲಾ ಪೀಠಗಳ ಕಲಾಪದಿಂದ ಹೊರಗುಳಿದಿದ್ದರು. ಇದರಿಂದ ಕೋರ್ಟ್ ಹಾಲ್‌ಗಳು ಖಾಲಿ ಖಾಲಿಯಾಗಿದ್ದವು. ಕೆಲವು ವಕೀಲರು ವಿಡಿಯೋ ಕಾನ್ಫಿರೆನ್ಸ್ (ವಿಸಿ) ಮೂಲಕ ಹಾಜರಾಗಿ ಸಮಯಾವಕಾಶ ಕೋರುತ್ತಿದ್ದ ದೃಶ್ಯಗಳು ಕಂಡು ಬಂದವು.

ನ್ಯಾಯಮೂರ್ತಿಗಳು, ಕೋರ್ಟ್‌ಗಳಲ್ಲಿದ್ದ ಸರ್ಕಾರಿ ವಕೀಲರು ಹಾಗೂ ಸಿಬ್ಬಂದಿಯಿಂದ ಕಲಾಪ ನಡೆಸಿದರು. ಬಹುತೇಕ ಕೋರ್ಟ್‌ಗಳಲ್ಲಿ ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಯಿತು. ಕೋರ್ಟ್‌ಗಳಲ್ಲಿ ನಿಗದಿಯಂತೆ ಪೂರ್ಣ ಪ್ರಮಾಣದಲ್ಲಿ ಕಲಾಪ ನಡೆಯಲಿಲ್ಲ.

ನಾಲ್ವರು ನ್ಯಾಯಮೂರ್ತಿಗಳನ್ನು ದೇಶದ ಬೇರೆ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಮಾಡಿರುವ ಶಿಾರಸು ವಿರೋಧಿಸಿ ಬುಧವಾರ ಹೈಕೋರ್ಟ್‌ನ ಕಲಾಪವನ್ನು ಬಹಿಷ್ಕರಿಸಲು ಬೆಂಗಳೂರು ವಕೀಲರ ಸಂಘದ ವತಿಯಿಂದ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಕಲಾಪ ಬಹಿಷ್ಕಾರದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಿ ಮಾಡಿರುವ ಪ್ರಕರಣಗಳನ್ನು ಗುರುವಾರ ನಡೆಸುವಂತೆ ಬೆಂಗಳೂರು ವಕೀಲರ ಸಂಘ ಮುಖ್ಯ ನ್ಯಾಯಮೂರ್ತಿ ಮತ್ತು ಇತರೆ ನ್ಯಾಯಮೂರ್ತಿಗಳನ್ನು ಒತ್ತಾಯಿಸಿದೆ.

ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ವಕೀಲರ ಸಂಘಗಳು ಒಟ್ಟಾಗಿ ಈ ನಿಲುವಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡಲು ನೆರವಾಗುವಂತೆ ಬೆಂಗಳೂರು ವಕೀಲರ ಸಂಘ ಕೋರಿತ್ತು. ಮಂಗಳವಾರ ವಕೀಲರು ಹೈಕೋರ್ಟ್ ಮುಂಭಾಗ ಪ್ರತಿಭಟನೆ ನಡೆಸಿದ್ದರು.