ನ್ಯೂಸ್

ಡಿಸಿಎಂ ಶಿವಕುಮಾರ್ ಕಡೆಗಣನೆಗೆ ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಆಕ್ರೋಶ

ಬೆಂಗಳೂರು: ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕ ಹುದ್ದೆಗಳ ಆಕಾಂಕ್ಷಿಗಳ ತಾಳ್ಮೆಯ ಕಟ್ಟೆಯೊಡೆದು, ಡಿಸಿಎಂ ಡಿ.ಕೆ.ಶಿವಕುಮಾರ್ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಶನಿವಾರ ನಡೆಯಿತು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಿಕ್ಷಕರ ಹುದ್ದೆ ಆಕಾಂಕ್ಷಿಗಳು ತಮ್ಮ ಅಹವಾಲು ನಿವೇದನೆಗೆ ಸದಾಶಿವ ನಗರದ ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸದ ಬಳಿ ಕಾದು ನಿಂತಿದ್ದರು. ನಿವಾಸದಿಂದ ಹೊರ ಬಂದ ಡಿಕೆಶಿ ಮಾಧ್ಯಮದವರ ಜತೆಗೆ ಚುಟುಕು ಪ್ರತಿಕ್ರಿಯೆ ನೀಡಿ, ಇವರತ್ತ ನೋಡದೆ ಪೂರ್ವನಿಗದಿತ ಕಾರ್ಯಕ್ರಮಕ್ಕೆ ತೆರಳಿದರು.

ಕೋಪ್ರೋದ್ರಿಕ್ತ ಯುವಜನರು ನಿವಾಸದೆಡೆ ಧಾವಿಸಲು ಮುಂದಾದಾಗ ಪೊಲೀಸರು ತಡೆದು ನಿಲ್ಲಿಸಿ, ಸಮಾಧಾನಪಡಿಸಲು ಪ್ರಯತ್ನಿಸಿದರು. ಇದೇ ವೇಳೆ ಹಾಜರಿದ್ದ ಪತ್ರಕರ್ತರ ಮುಂದೆ ತಮ್ಮ ಸಂಕಷ್ಟ ತೋಡಿಕೊಂಡರು.

ವ್ಯವಧಾನ ಇಲ್ಲದೇ ಹೋಯಿತಲ್ಲ

ನಮ್ಮ ನೋವು, ಖಾಲಿಯಿರುವ ಶಿಕ್ಷಕರ ಹುದ್ದೆಗಳ ಭರ್ತಿ ಬಗ್ಗೆ ಡಿಸಿಎಂ ಬಳಿ ಹೇಳಿಕೊಳ್ಳಲು ಎರಡು ದಿನಗಳಿಂದ ಕಾಯುತ್ತಿದ್ದೇವೆ. ಒಂದೈದು ನಿಮಿಷ ನಿಂತು ಅಹವಾಲು ಕೇಳುವಷ್ಟು ವ್ಯವಧಾನವೂ ಇಲ್ಲದೇ ಹೋಯಿತಲ್ಲ ಎಂದು ಅಸಹನೆ ವ್ಯಕ್ತಪಡಿಸಿದರು.

ವೋಟು ಕೇಳಬೇಕಾದರೆ ಎಲ್ಲ ಮನೆಗಳಿಗೆ ಸುತ್ತಲೂ ಸಮಯಾವಕಾಶವಿರುತ್ತದೆ. ಖುದ್ದು ಮನೆ ಬಳಿಗೆ ಬಂದವರನ್ನು ಏಕೆ ಬಂದಿರಿ ? ಎಂದು ಕೇಳುವಷ್ಟು ಪುರುಸೊತ್ತಿರುವುದಿಲ್ಲ ಎಂದು ಜೋರು ಧ್ವನಿಯಲ್ಲಿ ಕಿಡಿಕಾರಿದರು.

ಏನದು, ಅಹವಾಲು ?

ಕಲ್ಯಾಣ ಕರ್ನಾಟಕ ಪ್ರಾಂತದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಒಟ್ಟು 5267 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ.

ಈ ಪೈಕಿ ಜಿಪಿಟಿ (6 ರಿಂದ 8ನೇ ತರಗತಿ) ಕೇವಲ 78, ಸೆಕಂಡರಿ ಪಿಇಟಿ 216 ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದೆ.

ಕಲ್ಯಾಣ ಕನಾಟಕ ಸೇರಿ ಇಡೀ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಅಗತ್ಯವಿದೆ. ಈ ರೀತಿ ಮಾಡಿದ್ದಾದರೆ ಪದವಿ, ಸ್ನಾತಕೋತ್ತರ ಪದವಿ ಜತೆಗೆ ಬಿ.ಇಡಿ ವ್ಯಾಸಂಗ ಪೂರ್ಣಗೊಳಿಸಿ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುತ್ತದೆ.

ಅಲ್ಲದೆ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಣದ ಗುಣಮಟ್ಟ ಮತ್ತು ಲಿತಾಂಶ ಸುಧಾರಣೆ ಸಾಧ್ಯವಿದೆ. ಅತಿಥಿ ಶಿಕ್ಷಕರ ನೇಮಕ ಕೈಬಿಟ್ಟು, ಕಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಶಿಕ್ಷಕ ಹುದ್ದೆ ಆಕಾಂಕ್ಷಿಗಳು ತಮ್ಮ ಅಹವಾಲು ವಿವರಿಸಿದರು.