ನ್ಯೂಸ್

ದುಬಾರಿ ಟೊಮ್ಯಾಟೊ: ತಾರಕಕ್ಕೇರಿದ ಗ್ರಾಹಕ -ಮಾರಾಟಗಾರನ ಜಗಳ, ಕೊನೆಗೇನಾಯ್ತು?


ಪುಣೆ: ಟೊಮ್ಯಾಟೊ ಬೆಲೆ ಕೆಜಿಗೆ 20 ರಿಂದ 100 ರೂ.ಗೆ ಏರಿಕೆಯಾಗಿರುವುದರಿಂದ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿದ್ದಂತೆ ಗ್ರಾಹಕ ಮತ್ತು ಮಾರಾಟಗಾರರ ನಡುವೆ ಅಕ್ಷರಶಃ ಹೊಡೆದಾಟ ಶುರುವಾಗಿದೆ. ತರಕಾರಿ ಮಾರಾಟಗಾರನೊಬ್ಬ ಕೋಪಗೊಂಡು ಗ್ರಾಹಕನ ಮುಖದ ಮೇಲೆ ತೂಕದ ಕಲ್ಲನ್ನು ಎಸೆದಿದ್ದು, ಗ್ರಾಹಕನಿಗೆ ಗಂಭೀರ ಗಾಯವಾಗಿರುವ ಘಟನೆ ಇಲ್ಲಿನ ಚಂದನನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊನೆಗೆ ಚಂದನನಗರ ಪೊಲೀಸರು ಮಾರಾಟಗಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹಲ್ಲೆ ನಡೆಸಿದ ಮಾರಾಟಗಾರ
ಗ್ರಾಹಕ ಗೋಪಾಲ್ ಗೋವಿಂದ್ ಧೆಪೆ ಗಲಾಂಡೆನಗರ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸೆಕ್ಯುರಿಟಿ ಗಾರ್ಡ್​​​​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೋಪಾಲ್ ಗೋವಿಂದ್ ಧೆಪೆ ವಡಗಾಂವ ಶೇರಿಯ ತರಕಾರಿ ಮಾರುಕಟ್ಟೆಗೆ ಸಂಜೆ 7:30ಕ್ಕೆ ತರಕಾರಿ ತರಲು ಹೋಗಿದ್ದರು. ಆಗ ಮಾರಾಟಗಾರರೊಬ್ಬರು ಹೇಳಿದ ಟೊಮ್ಯಾಟೊ ಬೆಲೆ ಕೇಳಿ ಧೇಪೆ ಆಶ್ಚರ್ಯ ವ್ಯಕ್ತಪಡಿಸಿ, ‘ಅಯ್ಯೋ... ಇಷ್ಟು ದುಬಾರಿ!’ ಎಂದು ಉದ್ಗರಿಸಿದ್ದಾರೆ. ಕೊನೆಗೆ ಮಾರಾಟಗಾರ ಅನಿಲ್ ಗಾಯಕ್‌ವಾಡ್‌ ಅವರನ್ನು ನಿಂದಿಸಲು ಪ್ರಾರಂಭಿಸಿದ್ದಲ್ಲದೆ, ತಳ್ಳಲು ಪ್ರಾರಂಭಿಸಿದರು. ಆಗ ಧೇಪೆ, ‘ಶಾಪ ಹಾಕಬೇಡಿ’ ಎಂದಾಗ ಗಾಯಕ್‌ವಾಡ್‌ ಅದಕ್ಕೆ ಸಿಟ್ಟುಗೊಂಡು ಹಲ್ಲೆ ಮಾಡಿದ್ದಾನೆ.

ದೂರು ದಾಖಲು
ಕೋಪದ ಭರದಲ್ಲಿ, ಗಾಯಕ್‌ವಾಡ್‌ ತನ್ನ ಕೈಯಲ್ಲಿದ್ದ ತೂಕದ ಕಲ್ಲನ್ನು ತೆಗೆದುಕೊಂಡು ಧೆಪೆಯ ಬಲ ಕೆನ್ನೆಯ ಮೇಲೆ ಎಸೆದನು. ಇದರಿಂದಾಗಿ ಧೆಪೆಯ ಕೆನ್ನೆ ರಕ್ತಮಯವಾಯಿತು. ಆ ಬಳಿಕ ಧೇಪೆ ಕೂಡಲೇ ಪತ್ನಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಹೆಂಡತಿ ತನ್ನ ಗಂಡನನ್ನು ಸಾಸೂನ್ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಪಡೆದ ಬಳಿಕ ಪತ್ನಿ ಮಾರಾಟಗಾರ ಗಾಯಕ್‌ವಾಡ್‌ ವಿರುದ್ಧ ಚಂದನನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟೊಮ್ಯಾಟೊ ಮೇಲೆ ನಿಗಾ
ಈ ಮೊದಲು ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. ಈಗ ಟೊಮ್ಯಾಟೊ ಬಾಯಲ್ಲಿ ನೀರೂರುವಂತೆ ಮಾಡಿದೆ. ಟೊಮ್ಯಾಟೊ ಬೆಲೆ ಏರಿಕೆ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಚಂದನನಗರ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಈ ವಿವಾದದಿಂದ ಪೊಲೀಸರೂ ಕಂಗಾಲಾಗಿದ್ದು, ಇದೀಗ ಟೊಮ್ಯಾಟೊ ಮೇಲೆ ನಿಗಾ ಇಟ್ಟಿದ್ದಾರೆ.