ನ್ಯೂಸ್

ಸಚಿವ ಸಂಪುಟದಿಂದ ಪ್ರಿಯಾಂಕ್ ಖರ್ಗೆ ವಜಾ: ಛಲವಾದಿ ಒತ್ತಾಯ

ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಕೆಐಡಿಬಿಯ ಐದು ಜಮೀನು ಮಂಜೂರಾಗಿದೆ. ಸಚಿವರಾಗಿ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಮಂಗಳವಾರ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನ ಡಿೆನ್ಸ್ ಏರೋಸ್ಪೇಸ್ ಪಾರ್ಕ್‌ನ ಐದು ಎಕರೆ ಜಮೀನನ್ನು ಕೆಐಎಡಿಬಿಯು ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಮಂಜೂರು ಮಾಡಿದೆ.

ಆಸಕ್ತಿದಾಯಕ ಸಂಗತಿಯೆಂದರೆ, ಈ ಟ್ರಸ್ಟ್‌ಗೆ ಖರ್ಗೆ ಕುಟುಂಬದವರೇ ಸದಸ್ಯರು. ಖರ್ಗೆಯವರು ಏರೋಸ್ಪೇಸ್ ಉದ್ಯಮಿಗಳಾದದ್ದು ಯಾವಾಗ ? ಎಂಬ ಪ್ರಶ್ನೆ ಉದ್ಭವಿಸಿದೆ. ಅರ್ಹ ದಲಿತರ ಸಂಸ್ಥೆಗಳಿಗೆ ಮಂಜೂರಾಗಬೇಕಾದ ನಿವೇಶನವನ್ನು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಅಧಿಕಾರದ ಪ್ರಭಾವ ಬಳಸಿ ಕಿತ್ತುಕೊಂಡಿದ್ದಾರೆ. ಪ್ರಮಾವಚನ ಸ್ವೀಕಾರಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದು, ಗಂಭೀರವಾಗಿ ಪರಿಗಣಿಸಬೇಕು. ಅರ್ಹ ದಲಿತ ಸಂಸ್ಥೆಗಳ ಕೋರಿಕೆಯನ್ನು ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ.

ವೈಯಕ್ತಿಕ ವಾಗ್ದಾಳಿ

ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ಟ್ರಸ್ಟ್‌ಗೆ ಕೆಐಎಡಿಬಿ ಜಮೀನು ಮಂಜೂರು ಪ್ರಶ್ನಿಸಿದ್ದಕ್ಕೆ ಪ್ರಿಯಾಂಕ್ ಖರ್ಗೆ ಮತ್ತು ಅವರ ಸ್ನೇಹಿತರು ನನ್ನ ಮೇಲೆ ರಾಜಸ್ಥಾನಿ ಎಂದು ವಾಗ್ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯ ಕಿಡಿಕಾರಿದ್ದಾರೆ.

ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸೋನಿಯಾಗಾಂಧಿ ಝುಂಝುನು, ರಾಜಸ್ಥಾನದಿಂದ ಟಿಕೆಟ್ ಪಡೆಯಲು ಕೆ.ಸಿ.ವೇಣುಗೋಪಾಲ್ ಸಿಕಾರ್, ರಣದೀಪ್ ಸಿಂಗ್ ಸುರ್ಜೇವಾಲ ಚುರುವಿನಲ್ಲಿ ಜನಿಸಿದವರೆ ?. ರಾಜಸ್ಥಾನವೇನೂ ಪಾಕಿಸ್ತಾನದಲ್ಲಿಲ್ಲ, ರಾಜಸ್ಥಾನಿ ಆಗಿರುವುದು ಅಪರಾಧವಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, 59 ವರ್ಷಗಳಿಂದ ಕರ್ನಾಟಕದಲ್ಲಿಯೇ ನೆಲೆಸಿದ್ದು, ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಜೂನಿಯರ್ ಖರ್ಗೆ ಅಥವಾ ರಾಹುಲ್ ಗಾಂಧಿಯವರಂತೆ ಕುಟುಂಬ ರಾಜಕಾರಣದಿಂದ ಬಂದವನಲ್ಲ ಎಂದು ಕುಟುಕಿದ್ದಾರೆ.

ಭೂಮಿ ಹಂಚಿಕೆ ಪ್ರಕರಣವನ್ನು ರಾಜ್ಯಪಾಲರನ್ನು ಪರಿಶೀಲಿಸುತ್ತಾರೆ. ಖರ್ಗೆ ಕುಟುಂಬದವರಾಗಲಿ, ಸಚಿವರಾಗಲಿ ಭೂ ಮಂಜೂರಾತಿಯನ್ನು ನಿರಾಕರಿಸದೆ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದ ಜನ ಬುದ್ಧಿವಂತರಿದ್ದು, ಇದನ್ನು ಹೇಗೆ ಅರ್ಥೈಸಬೇಕೆಂದು ಗೊತ್ತಿದೆ.

ಬೇರೆಯವರಿಗೆ ಕಲ್ಲೆಸೆಯುವ ಮುನ್ನ ಜೂನಿಯರ್ ಖರ್ಗೆಯವರು ತಾವು ಗಾಜಿನ ಮನೆಯಲ್ಲಿದ್ದೇವೆ ಎನ್ನುವುದನ್ನೂ ತಿಳಿದುಕೊಳ್ಳಲಿ ಎಂದು ಲಹರ್ ಸಿಂಗ್ ಸಿರೋಯ ತಿವಿದಿದ್ದಾರೆ.