ಸಾಗರ: ಹಿರಿಯ ನಾಗರಿಕರು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿದರೆ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ ಎಂದು ಸಾಹಿತಿ ವಿ.ಗಣೇಶ್ ಹೇಳಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಸಾಗರದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ನಿವೃತ್ತ ನೌಕರರ ಸಂಘದಿಂದ ಸೋಮವಾರ ಆಯೋಜಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯ ನಾಗರಿಕರು ಸದಾ ಆತ್ಮಸ್ಥೈರ್ಯದಿಂದ ಜೀವನ್ಮುಖಿಯಾಗಿ ಮುನ್ನಡೆಯಬೇಕು. ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಕಾಯಿಲೆಗಳೇ ಸುಳಿಯುವುದಿಲ್ಲ. ನಿವೃತ್ತ ನೌಕರರ ಸಂಘ ಹಿರಿಯ ನಾಗರಿಕರನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ನಿರಂತರ ಚಟುವಟಿಕೆ ಹಮ್ಮಿಕೊಂಡು ಬರುತ್ತಿದೆ ಎಂದರು.
ಸಂಘದ ಗೌರವಾಧ್ಯಕ್ಷ ಎಸ್.ಬಸವರಾಜ್ ಮಾತನಾಡಿ, ಅ.1ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಗುತ್ತದೆ. ಆಗ ಹಿರಿಯ ಸಾಧಕರಿಗೆ ಸನ್ಮಾನ, ಬಹುಮಾನ ವಿತರಣೆ ಮಾಡಲಾಗುವುದು. 60 ವರ್ಷ ಮೇಲ್ಪಟ್ಟ ಎಲ್ಲರೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರ ಕ್ರಿಯಾಶೀಲತೆ ಯುವಜನರಿಗೆ ಮಾದರಿ ಎಂದು ತಿಳಿಸಿದರು.
ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಮಾತನಾಡಿ, ನಿವೃತ್ತ ನೌಕರರ ಸಂಘವು ಕಳೆದ 12 ವರ್ಷಗಳಿಂದ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸುತ್ತಿದೆ. ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳಿದರು.
81 ವರ್ಷದ ದೇವಾಂಗನೆ ಹೊಸೂರು ಶಾಟ್‌ಪಟ್ ಎಸೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಂ.ರಾಮಪ್ಪ, ಎಸ್.ಬಿ.ರಘುನಾಥ್, ಸೋಮರಾಜ್, ಡಾ. ಪ್ರಸನ್ನ, ದಮಯಂತಿ, ಸಂಪತ್‌ಕುಮಾರ್, ನಾರಾಯಣಪ್ಪ, ರಾಜು ಜನ್ನೆಹಕ್ಲು, ದತ್ತಾತ್ರೇಯ, ಸತ್ಯನಾರಾಯಣ, ಪ್ರಭಾವತಿ, ವೀರರಾಜ ಜೈನ್, ಚಂದ್ರಶೇಖರ ಸಿರಿವಂತೆ ಇತರರಿದ್ದರು.