ಬೆಂಗಳೂರು: ಅರಣ್ಯ ಹಕ್ಕು ಕಾಯ್ದೆಯ ಸವಲತ್ತುಗಳಿಗೆ ಒತ್ತಾಯಿಸಿ ನಾಗರಹೊಳೆಯ 100ಕ್ಕೂ ಹೆಚ್ಚು ಬುಡಕಟ್ಟು ಸಮುದಾಯದ ಕುಟುಂಬಗಳು ನಡೆಸುತ್ತಿರುವ ಹೋರಾಟ ಗಮನಕ್ಕೆ ಬಂದಿದೆ. ಈ ಸಮಸ್ಯೆ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚಿಸಿ ಸೂಕ್ತ ಕ್ರಮವಹಿಸುವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ನಾಗರಹೊಳೆಯಿಂದ 30 ವರ್ಷಗಳ ಒಕ್ಕಲೆಬ್ಬಿಸಿದ ಮೂಲ ನಿವಾಸಿಗಳು ಎಂದು ಹೋರಾಟನಿರತರು ಹೇಳುತ್ತಿದ್ದಾರೆ. ಈ ಬಗ್ಗೆ ಮೈಸೂರು ಡಿಎ್ಒಗೆ ವರದಿ ಸಲ್ಲಿಸಲು ಸೂಚಿಸಿರುವೆ.
ಮೂಲ ದಾಖಲೆಗಳನ್ನು ಪರಿಶೀಲಿಸಲಿದ್ದು, ದಾಖಲೆಗಳು ನೈಜ. ಮೂಲ ನಿವಾಸಿಗಳು ಎನ್ನುವುದು ದೃಢಪಟ್ಟರೆ, ಸಿಎಂ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಈಶ್ವರ ಖಂಡ್ರೆ ಹೇಳಿದರು.
ನಾಗರಹೊಳೆ ಹುಲಿ ಸಂರಕ್ಷಿತ ರಾಷ್ಟ್ರೀಯ ಉದ್ಯಾನವನವೆಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಇಂತಹ ಪ್ರದೇಶದ ಮೂಲ ನಿವಾಸಿಗಳ ಸ್ಥಳಾಂತರ, ಪುನರ್ವಸತಿಗೆ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಒದಗಿಸುತ್ತದೆ.
ಪ್ರತಿ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತದಲ್ಲಿ ಮೂರು ಎಕರೆ ಜಮೀನು ಹಾಗೂ ಮನೆಗಳನ್ನು ಕಟ್ಟಿಕೊಡುವುದು ಅರಣ್ಯ ಹಕ್ಕು ಪಾಕ್ಯೇಜ್‌ನಲ್ಲಿದೆ. ಇದೇ ಸೌಲಭ್ಯಕ್ಕಾಗಿ ಕೊಡಗು ಬಳಿ ಬುಡಕಟ್ಟು ಸಮುದಾಯದ ಮೂಲ ನಿವಾಸಿಗಳೆಂದು 100ಕ್ಕೂ ಹೆಚ್ಚು ಕುಟುಂಬಗಳು ಹೋರಾಟಕ್ಕಿಳಿದಿವೆ.
ನಾಗರಹೊಳೆ ಮೂಲ ನಿವಾಸಿಗಳಾಗಿದ್ದು, 30 ವರ್ಷಗಳ ಹಿಂದೆ ಒಕ್ಕಲೆಬ್ಬಿಸಲಾಗಿದೆ. ಸರಿಯಾದ ಪುನರ್ವಸತಿ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ ಅರಣ್ಯ ಹಕ್ಕು ಕಾಯ್ದೆ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಚಳವಳಿ ಮತ್ತು ಗಲಾಟೆ ವಿದ್ಯಮಾನ ಕೇಂದ್ರದ ಗಮನಕ್ಕೂ ಬಂದಿದೆ. ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯ ಮೂರು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ತ್ವರಿತವಾಗಿ ಈ ಸಮಸ್ಯೆ ಬಗೆಹರಿಸಲು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.