ಭದ್ರಾವತಿಯಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರಿಗೆ ಗೌರವ ಸಮರ್ಪಿಸಲಾಯಿತು. ಬಾರಂದೂರು ಪ್ರಕಾಶ್, ಸುವರ್ಣಮ್ಮ, ಗೀತಾ ರಾಜಕುಮಾರ್, ಅನುಪಮಾ ಚನ್ನೇಶ್ ಇತರರಿದ್ದರು.  
ನ್ಯೂಸ್

ಅನುಭವ ಮಂಟಪದಲ್ಲಿನ ಚರ್ಚೆ ಆರೋಗ್ಯಕರ

ಭದ್ರಾವತಿ: ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪ ಎಂಬುದೇ ಇರಲಿಲ್ಲ ಎಂಬ ಮಾತು ಇತ್ತೀಚೆಗೆ ತುಂಬ ಚರ್ಚೆಯ ವಿಷಯವಾಗುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದು ಚಿಕ್ಕಮಗಳೂರು ಬಸವತತ್ವ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ತಿಳಿಸಿದರು.

ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಶನಿವಾರ ಅಕ್ಕಮಹಾದೇವಿ ಮಂದಿರ ಮತ್ತು ಬಳಗದಿಂದ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ವೇದಗಳ ಕಾಲದಲ್ಲಿಯೂ ಜ್ಞಾನಿಗಳ ನಡುವೆ ಸಂವಾದದ ಮೂಲಕ ವಿಷಯದ ವಿನಿಮಯವಾಗುತ್ತಿತ್ತು. ಆದರೆ 12ನೇ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಸಂವಾದದಲ್ಲಿ ಬಸವಣ್ಣನ ನೇತೃತ್ವದಲ್ಲಿ ಸಮಾಜದ ಎಲ್ಲ ಸ್ಥರಗಳ ಸಾಮಾನ್ಯ ಜನರು ಭಾಗವಹಿಸಿ ತಮ್ಮ ಅನುಭವದ ವಿಷಯಗಳನ್ನು ಅಲ್ಲಿ ಆರೋಗ್ಯಕರವಾಗಿ ಸಂವಾದ ನಡೆಸುತ್ತಿದ್ದರು. ಇದು ಸಂಶೋಧನಾತ್ಮಕವಾಗಿಯೂ ಸಾಬೀತಾದ ವಿಷಯ. ಈಗ ಪುನಃ ಅದನ್ನು ಕೆಲವರು ಕೆದಕಿ ಅನುಭವ ಮಂಟಪ ಎಂಬುದು ನಡದೇಯಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.

ಕಿರುಕುಳ ಬೇಸರದ ಸಂಗತಿ: ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆಯವರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ದೇಹದ ಮೇಲಿನ ಅಭಿಮಾನವನ್ನು ತೊರೆದು ಭಗವಂತನನ್ನೇ ತನ್ನ ಪತಿಯೆಂದು ವಿವಸಳಾಗಿ ಉಡುತಡಿಯಿಂದ ಕಲ್ಯಾಣದ ಅನುಭವ ಮಂಟಪದವರೆಗೆ, ಅಲ್ಲಿಂದ ಶ್ರೀಶೈಲದವರೆಗೆ ಸಾಗಿದ ಅಕ್ಕಮಹಾದೇವಿ ಮೇಲೆ ಆಗಲೂ ಪುರುಷರು ಕಿರುಕುಳ ನೀಡಲು ಯತ್ನಿಸಿದ್ದಾರೆ. ಈಗಲೂ ಅಂತಹ ಪುರುಷರು ಅದೇ ಕೆಟ್ಟಭಾವನೆ ಹೊಂದಿದ್ದಾರೆ. ಇದರಿಂದ ಪ್ರತಿದಿನ ಹಲವು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ ಎಂದು ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಅಕ್ಕಮಹಾದೇವಿಯ ದಾರ್ಶನಿಕತೆಯನ್ನು ಲಿಂಗ ಭೇದವಿಲ್ಲದೆ ಇಡೀ ಮಾನವಕುಲ ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು. ವಚನ ಸಾಹಿತ್ಯಕ್ಕೆ ಅಕ್ಕಮಹಾದೇವಿ ನೀಡಿದ ಕೊಡುಗೆ ಅನನ್ಯ ಎಂದರು.

ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡಿದ ಬಾರಂದೂರು ಪ್ರಕಾಶ್, ಅಕ್ಕನ ವಚನಗಳು ಅದ್ಭುತ ಆಧ್ಯಾತ್ಮಿಕ ಸಾರವನ್ನು ಒಳಗೊಂಡಿವೆ. ಅದನ್ನು ಆಕೆ ಅನುಭವಿಸಿ, ಪ್ರಕೃತಿಯೊಂದಿಗೆ ಲೀನವಾಗಿ ಭಗವಂತನನ್ನು ತನ್ನೊಳಗೆ ಕಂಡುಕೊಂಡು ರಚಿಸಿದ ವಚನಸಾಹಿತ್ಯ ಅಪ್ರತಿಮ, ಅಸಾಮಾನ್ಯ ಎಂದು ಬಣ್ಣಿಸಿದರು.

ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಸುವರ್ಣಮ್ಮ, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಸದಸ್ಯೆ ಅನುಪಮಾ ಚನ್ನೇಶ್, ಉದ್ಯಮಿ ಜಗನ್ನಾಥ್, ಬಸವಕೇಂದ್ರದ ಅಧ್ಯಕ್ಷ ಜಗದೀಶ್ ಕವಿ ಉತರರಿದ್ದರು.