ಬೆಂಗಳೂರು: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು, ಚತುಷ್ಪಥ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ಯೋಜನೆಗಳ ಸಾಧಕ-ಬಾಧಕ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಮಂಗಳವಾರ ಭೇಟಿಯಾದ ರಾಷ್ಟ್ರೀಯ ಮೀನುಗಾರರ ಸಂಘದ ನಿಯೋಗದ ಜತೆಗೆ ಸಿದ್ದರಾಮಯ್ಯ ಚರ್ಚಿಸಿದರು. ಜತೆಗೆ ಮನವಿಪತ್ರವನ್ನು ಸ್ವೀಕರಿಸಿ, ಯೋಜನೆ ಮಾರಕ ಹೇಗೆಂಬುದರ ಬಗ್ಗೆ ಅಹವಾಲು ಆಲಿಸಿದರು.
ಸದ್ಯದಲ್ಲೇ ಮೀನುಗಾರಿಕೆ ಹಾಗೂ ಬಂದರು ಸಚಿವ ಮಂಕಾಳು ವೈದ್ಯ, ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಮೂರು ಯೋಜನೆಗಳನ್ನು ಮರು ಪರಿಶೀಲಿಸುವೆ. ನಂತರ ಸಂಘಟನೆ ನಿಯೋಗವನ್ನು ಮಾತುಕತೆಗೆ ಕರೆದು ಸರ್ಕಾರದ ನಿರ್ಧಾರ ತಿಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ.
ಖಾಸಗಿ ವಾಣಿಜ್ಯ ಬಂದರು ಯೋಜನೆಯಿಂದ ಸಾವಿರಾರು ಮೀನುಗಾರರಿಗೆ ತಮ್ಮ ವಸತಿ ನೆಲೆಗಳು, ಜೀವನೋಪಾಯಕ್ಕೆ ಮೀನುಗಾರಿಕೆ ಕಳೆದುಕೊಳ್ಳುವ ಆತಂಕವಿದ್ದು, ಸ್ಥಳೀಯ ಪರಿಸರಕ್ಕೆ ಮಾರಕವಾಗಿದೆ.
ಅಲ್ಲದೆ, ಪರಿಸರ ಸೂಕ್ಷ್ಮ ಕಡಲ ತೀರದ ಐದು ಕಿ.ಮೀ. ಉದ್ದಮ ಮೀನುಗಾರರ ವಸತಿ ನೆಲೆಯಲ್ಲಿ ಚತುಷ್ಪಥ ಮತ್ತು ರೈಲು ಮಾರ್ಗ ನಿರ್ಮಾಣದ ಯೋಜನೆಯು ಮಾರಕವಾಗಿದೆ. ಪರಿಸರ ಸೂಕ್ಷ್ಮ ವಲಯ, ಮೀನುಗಾರಿಕೆ ಮತ್ತು ಮೀನುಗಾರರ ರಕ್ಷಣೆಗಾಗಿ ಮಾರಕ ಯೋಜನೆಗಳನ್ನು ಕೈಬಿಡಲು ನಿಯೋಗ ಒತ್ತಾಯಿಸಿತು.
ಕರಾವಳಿಯಲ್ಲಿ ಸೀಬರ್ಡ್ ನೌಕಾ ನೆಲೆ, ಕಾರವಾರ ಮತ್ತು ಬೇಲೆಕೇರಿ ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರರು ವಸತಿ ನೆಲೆಗಳನ್ನು ಕಳೆದುಕೊಂಡಿದ್ದಾರೆ. ಪರಿಸರದ ಮೇಲೂ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ ಎಂಬ ಕಳವಳ ವ್ಯಕ್ತಪಡಿಸಿತು.
ಕಡಲ ತೀರಗಳಲ್ಲಿ ಮೀನುಗಾರಿಕೆಯೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ ಪ್ರಯತ್ನಗಳು ನಡೆಯುತ್ತಿದ್ದವು. ಈ ನಡುವೆ ಕರಾವಳಿಯ ಧಾರಣಾಶಕ್ತಿಯನ್ನು ಮೀರಿ ಅಗತ್ಯಕ್ಕಿಂತ ಹೆಚ್ಚು ಪರಿಸರ ವಿರೋಧಿ ವಾಣಿಜ್ಯ ಬಂದರುಗಳ ನಿರ್ಮಾಣವು ಜೀವವೈವಿಧ್ಯತೆ, ಪರಿಸರ ಸೂಕ್ಷ್ಮ ಸುಂದರ ಕಡಲ ತೀರ ಹದಗೆಡಲಿದೆ ಎಂದು ಮನವಿಯಲ್ಲಿ ವಿವರಿಸಿದೆ.
ಈ ಯೋಜನೆಗಳನ್ನು ಕೈಬಿಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸಿದ ಬಡ ಮೀನುಗಾರರ ಮೇಲೆ ಪೊಲೀಸರು ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು. ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ನ್ಯಾಯ ನೀಡಬೇಕು ಎಂದು ನಿಯೋಗ ವಿನಂತಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ ತಾಂಡೇಲ, ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ್, ಪದಾಧಿಕಾರಿಗಳಾದ ಅಲೆನ್ಸ್, ವಿಕಾಸ ತಾಂಡೇಲ್, ವಿವಿಧ ರಾಜ್ಯಗಳ ಪ್ರತಿನಿಧಿಗಳು ಇದ್ದರು.