ನ್ಯೂಸ್

ಕೇಂದ್ರದಿಂದ ತಾರತಮ್ಯ; ಬಿಹಾರ, ಆಂಧ್ರಕ್ಕೆ ಹೇಗೆ ಕೊಟ್ಟರು?

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ವಾಗ್ದಾಳಿ ನಡೆಸಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಇದ್ದಾಗ ಅಷ್ಟು ಕೊಟ್ಟಿತ್ತು. ಈಗ ಇಷ್ಟು ಕೊಟ್ಟಿದ್ದೇವೆ ಎಂದು ಹೇಳುವುದಲ್ಲ. ಆಗಿನ ಬಜೆಟ್ ಗಾತ್ರ ಎಷ್ಟಿತ್ತು ಎಂಬುದನ್ನು ಗಮನಿಸಿದರೆ ಹೋಲಿಕೆಗೆ ಒಂದು ಅರ್ಥ ಇರುತ್ತದೆ. ಚಂದ್ರಬಾಬು ನಾಯ್ಡು ಅವರಿಗೆ 15 ಸಾವಿರ ಕೋಟಿ ರೂ. ಯಾವ ಆಧಾರದ ಮೇಲೆ ಕೊಟ್ಟರು. ಏನಾದರೂ ಮಾನದಂಡ ಇರಬೇಕಲ್ಲವೆ? ಬಿಹಾರಕ್ಕೆ ಇನ್ನೂ ಹೆಚ್ಚು ಹಣ ಕೊಟ್ಟರು. ಯಾವ ಆಧಾರದ ಮೇಲೆ ಕೊಟ್ಟರು? ಕರ್ನಾಟಕಕ್ಕೆ ಏಕೆ ತಾರತಮ್ಯ ಧೋರಣೆ ಎಂದು ಪ್ರಶ್ನಿಸಿದರು.

ಡ್ರಗ್ಸ್ ನಿಗ್ರಹಕ್ಕೆ ದೊಡ್ಡ ಅಭಿಯಾನ

ಡ್ರಗ್ಸ್ ವಿರುದ್ಧ ಪೊಲೀಸರು ದೊಡ್ಡ ಅಭಿಯಾನ ಮಾಡುತ್ತಿದ್ದಾರೆ. ಶಾಲೆ-ಕಾಲೇಜುಗಳಿಗೆ ಅಧಿಕಾರಿಗಳು ಹೋಗುತ್ತಾರೆ, ಮಾಹಿತಿ ಕೊಡುತ್ತಾರೆ. ವಿದ್ಯಾರ್ಥಿ ಭಾಗಿಯಾದದರೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು

ತೆರಿಗೆ ಪಾಲು ಕೊಡಲಿಲ್ಲ. ಬರ, ಅತೀವೃಷ್ಟಿ ಸಂದರ್ಭದಲ್ಲೂ ನೆರವಿಗೆ ಬರಲಿಲ್ಲ. ಕೊನೆಗೆ ಸುಪ್ರೀ ಕೋರ್ಟ್ ಮೆಟ್ಟಿಲೇರಬೇಕಾಯಿತು. ಇಷ್ಟೆಲ್ಲ ಆದರೂ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇಲ್ಲ ಸಲ್ಲದ ಆಪಾದನೆ ಸಲ್ಲದು

ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಖಾಸಗಿ ಕಂಪನಿಗಳು ಹಿಂದೇಟು ಹಾಕುತ್ತಿವೆ ಎಂಬ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ್, ಯಾವುದೇ ಕಂಪನಿ ಉದ್ಯಮ ಆರಂಭಿಸುವಾಗ ಒಂದೆರಡು ಆಯ್ಕೆ ಇಟ್ಟುಕೊಂಡಿರುತ್ತವೆ. ಯಾರಿಗೆ ಎಲ್ಲಿ ಹೆಚ್ಚು ಅನುಕೂಲ ಆಗುತ್ತದೆಯೋ ಅಲ್ಲಿಗೆ ಹೋಗುತ್ತಾರೆ. ಸುಮ್ಮನೇ ಇಲ್ಲ ಸಲ್ಲದ ಆಪಾದನೆ ಮಾಡುವುದು ಸರಿಯಲ್ಲ ಎಂದ ಹೇಳಿದರು.

ಅಕ್ರಮ ವಲಸಿಗರ ಬಗ್ಗೆ ಕಟ್ಟುನಿಟ್ಟಿನ ಕ್ರಮ:

ಬಾಂಗ್ಲಾ , ಆಫ್ರಿಕಾ ಸೇರಿದಂತೆ ಬೇರೆ ಬೇರೆ ದೇಶದ ಅಕ್ರಮ ವಲಸಿಗರನ್ನು ನಿಂತರವಾಗಿ ಪತ್ತೆ ಮಾಡುತ್ತೇವೆ. ಅವರನ್ನು ವಾಪಸ್ ಕಳಿಸುವ ಕೆಲಸವನ್ನೂ ಮಾಡುತ್ತಿದ್ದೇವೆ. ಡ್ರಗ್ಸ್‌ಗೆ ಸಂಬಂಧಪಟ್ಟಂತೆ 150 ಮಂದಿಯನ್ನು ಕಳುಹಿಸಿದ್ದೇವೆ. ಬಾಂಗ್ಲಾ ವಲಸಿಗರನ್ನು ಅವರ ದೇಶದ ದೇಶದ ಗಡಿವರೆಗೆ ಕೊರೆದುಕೊಂಡು ಹೋಗಿ ಬಿಟ್ಟು ಬಂದಿದ್ದೇವೆ. ಈ ವಿಚಾರದಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿಕೊಡುವವರನ್ನು ಹಿಡಿದು ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ವಾಕ್‌ಔಟ್ ಮಾಡಲು ಹೋಗಬೇಕೆ?

ನೀತಿ ಆಯೋಗದ ಸಭೆಗೆ ಜಗಳ ಮಾಡಿಕೊಂಡು ವಾಕ್ ಔಟ್ ಮಾಡಲು ಹೋಗಬೇಕೆ? ರಾಜ್ಯಗಳನ್ನು ಯಾವ ರೀತಿ ನೆಡೆಸಿಕೊಳ್ಳುತ್ತಾರೆ? ಒಕ್ಕೂಟ ವ್ಯವಸ್ಥೆ ಎಂದರೆ ಏನು ಹೇಳಬೇಕಾ? ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ೋಷಣೆ ಮಾಡಿದರೆ? 5300 ಕೋಟಿ ರೂ ಕೊಟ್ಟರೆ? ಬರದಲ್ಲಿ 36 ಸಾವಿರ ಕೊಟಿ ನಷ್ಟವಾಗಿದ್ದು, 12 ಸಾವಿರ ಕೋಟಿ ರೂ. ಬೇಡಿಕೆ ಇಟ್ಟಿದ್ದೇವೆ. ಅದನ್ನೂ ಕೊಟ್ಟಿಲ್ಲ. ತಾರತಮ್ಯ ಧೋರಣೆ ಅನುಸರಿಸಿ ಬೆಂಗಳೂರಿಗೆ ಬಂದು ಅಷ್ಟು ಕೊಟ್ಟಿದ್ದೇವೆ, ಇಷ್ಟು ಕೊಟ್ಟಿದ್ದೇವೆ ಎಂದು ಹೇಳಿದರೆ ಏನಾದರೂ ಅರ್ಥ ಇದೆಯಾ? ಎಂದು ನಿರ್ಮಲಾ ಸೀತಾರಾಮನ್ ಅವರನ್ನು ಡಾ.ಪರಮೇಶ್ವರ ತರಾಟೆ ತೆಗೆದುಕೊಂಡರು.