ತಿ.ನರಸೀಪುರ ತಾಲೂಕಿನ ಮುಡುಕುತೊರೆ ಜೆಎಸ್ಸೆಸ್ ಮಂಗಳ ಮಂಟಪದಲ್ಲಿ ಮಹಿಳೆಯರಿಗೆ ಆಯೋಜಿಸಿದ್ದ ಹಣಕಾಸು ನಿರ್ವಹಣೆ ಮತ್ತು ಬಳಕೆಯ ಕುರಿತು ಒಂದು ದಿನದ ತರಬೇತಿ ಕಾರ್ಯಗಾರವನ್ನು ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ಕುಮಾರ್ ಉದ್ಘಾಟಿಸಿದರು. ಡಾ. ದೇವರಾಜ್, ಶಂಕರ್, ಮುತ್ತುರಾಜ್, ಕೃಷ್ಣ ಇತರರು ಇದ್ದರು. 
ನ್ಯೂಸ್

ಗ್ರಾಮೀಣಕೂಟ ಸಂಸ್ಥೆಯಿಂದ ಶಿಸ್ತುಬದ್ಧ ವ್ಯವಹಾರ

ತಿ.ನರಸೀಪುರ: ತಾಲೂಕಿನ ಮುಡುಕುತೊರೆಯಲ್ಲಿರುವ ಜೆಎಸ್‌ಎಸ್ ಮಂಗಳ ಮಂಟಪದಲ್ಲಿ ಶನಿವಾರ ತಲಕಾಡು ಗ್ರಾಮೀಣ ಕೊಟ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರಿಗೆ ಹಣಕಾಸು ನಿರ್ವಹಣೆ ಮತ್ತು ಬಳಕೆಯ ಬಗ್ಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ಕುಮಾರ್ ಉದ್ಘಾಟಿಸಿದರು.

ಬಳಿಕ ಆನಂದ್ ಕುಮಾರ್ ಮಾತನಾಡಿ, ಶಿಸ್ತು ಬದ್ಧ ಆರ್ಥಿಕ ವ್ಯವಹಾರದ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗ್ರಾಮೀಣಕೂಟ ಸಂಸ್ಥೆ ಮಹತ್ತರವಾದ ಸಾಧನೆ ಮಾಡಿದೆ. ಪ್ರತಿಯೊಬ್ಬ ಮಹಿಳೆಯರು ಸಕಾಲದಲ್ಲಿ ಪಡೆದ ಸಾಲದ ಮರುಪಾವತಿ ಮಾಡುವ ಮೂಲಕ ಕುಟುಂಬದ ಬೆಳವಣಿಗೆ ಹಾಗೂ ಸಂಸ್ಥೆಯ ಪ್ರಗತಿಗೆ ಮಹಿಳೆಯರು ಮಾದರಿಯಾಗಬೇಕು. ಇದರೊಂದಿಗೆ ಸಾಲ ಮರುಪಾವತಿ ಮಾಡದೆ ವಿವಾದ ಮಾಡಿಕೊಂಡು ಪೊಲೀಸ್ ಠಾಣೆ ತನಕ ಬರಬಾರದು ಎಂದು ಸಲಹೆ ನೀಡಿದರು.

ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ದೇವರಾಜ್ ಮಾತನಾಡಿ, ಸುಸ್ಥಿರ ಕುಟುಂಬದ ಅಭಿವೃದ್ಧಿಯಲ್ಲಿ ಹಣಕಾಸು ಮತ್ತು ಆರೋಗ್ಯ ಬಹಳ ಮುಖ್ಯವಾಗಿದೆ. ಒಂದು ಕುಟುಂಬದ ಎಲ್ಲ ಸದಸ್ಯರು ಆರೋಗ್ಯವಂತರಾಗಿದ್ದರೆ, ಆ ಕುಟುಂಬ ಆರ್ಥಿಕವಾಗಿ ಹೊರೆಯಾಗದೆ ಆರ್ಥಿಕ ವ್ಯವಹಾರದಲ್ಲಿ ಯಶಸ್ಸು ಕಂಡು ಸಾಲಬಾಧೆ ಇಲ್ಲದೆ ಕುಟುಂಬವು ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯಕ್ಕೆ ಹಚ್ಚು ಗಮನ ಕೊಟ್ಟು ಹಣಕಾಸು ಉಳಿತಾಯ ಮಾಡಿ ಆರೋಗ್ಯವಂತ ಕುಟುಂಬ ನಿರ್ಮಿಸಿಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯ ನಿರೀಕ್ಷಕ ಶಂಕರ್, ಗ್ರಾಮೀಣ ಕೂಟ ಸಂಸ್ಥೆಯ ವಿಭಾಗೀಯ ವ್ಯವಸ್ಥಾಪಕ ಮುತ್ತುರಾಜ್, ಕ್ಷೇತ್ರಿಯ ವ್ಯವಸ್ಥಾಪಕ ಕೃಷ್ಣ, ಹಾಗೂ ರಾಮಲಿಂಗೇಶ್ವರ ತರಬೇತಿಯ ಪ್ರಶಿಕ್ಷಣಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.