ಅರಕಲಗೂಡು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ವೈದ್ಯರು ಮತ್ತು ನರ್ಸ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಶಾಸಕ ಎ.ಮಂಜು ಎಚ್ಚರಿಕೆ ನೀಡಿದರು.
ಆಸ್ಪತ್ರೆ ಸಭಾಂಗಣದಲ್ಲಿ ಮಂಗಳವಾರ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಕೆಲ ವೈದ್ಯರು ಮತ್ತು ನರ್ಸ್‌ಗಳು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಇಂತಹವರ ಹಾಜರಾತಿ ದಾಖಲೆ ಪಡೆದು ಶಿಸ್ತುಕ್ರಮಕ್ಕೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ಆಸ್ಪತ್ರೆಯಲ್ಲಿ ಮೂಳೆ ತಜ್ಞ ಡಾ.ಕೆ.ಎಂ.ಹರೀಶ್ ಕಳೆದ ಒಂದು ವರ್ಷದಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ. ಸುಳ್ಳು ದಾಖಲಾತಿ ನೀಡಿ ರಜೆ ಮೇಲೆ ತೆರಳಿರುವುದು ಬೆಳಕಿಗೆ ಬಂದಿದೆ. ಇವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸ್ವಾಮಿಗೌಡ ಅವರಿಗೆ ಸೂಚನೆ ನೀಡಿದರು.
ವೈದ್ಯಕೀಯ ವೃತ್ತಿ ದೇವರ ಕೆಲಸಕ್ಕೆ ಸಮಾನವಾಗಿದ್ದು ರೋಗಿಗಳಿಗೆ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಹೆರಿಗೆ ಸೇವೆಗೆ ಬರುವ ಗರ್ಭಿಣಿಯರಿಗೆ ಕುಂಟು ನೆಪ ಹೇಳಿ ಹೊರ ಆಸ್ಪತ್ರೆಗೆ ಕಳುಹಿಸಬಾರದು. ಸೂಕ್ತ ಚಿಕಿತ್ಸಾ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದರು. ಆರೋಗ್ಯ ರಕ್ಷಾ ಸಮಿತಿ ಉಪಾಧ್ಯಕ್ಷ ಎ.ಎಂ.ರಘು, ಸದಸ್ಯರಾದ ಗಣೇಶ್ ಶೆಟ್ಟಿ, ಬಾಣದಹಳ್ಳಿ ಗಣೇಶ್, ಡಾ.ದೀಪಕ್, ಡಾ.ಸುನಿಲ್ ಇದ್ದರು.