ನ್ಯೂಸ್

ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

ಬೆಂಗಳೂರು: ವರ್ಗಾವಣೆಗೊಂಡ ಸ್ಥಳಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.

ಈ ಸಂಬಂಧ ವರ್ಗಾವಣೆಗೊಂಡು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಗೈರಾಗಿರುವ ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ಬಗ್ಗೆ ವರದಿ ನೀಡುವಂತೆ ವಿವಿಧ ಘಟಕಗಳ ಮುಖ್ಯಸ್ಥರಿಗೆ ಡಿಜಿಪಿ ಪರವಾಗಿ ಎಡಿಜಿಪಿ (ಆಡಳಿತ) ಸೌಮೆಂದು ಮುಖರ್ಜಿ ಸುತ್ತೋಲೆ ಹೊರಡಿಸಿದ್ದಾರೆ.

ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಿ ಆಯಾ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ. ಆದರೆ ಕೆಲ ಅಧಿಕಾರಿಗಳು ವರದಿ ಮಾಡದಿರುವುದು ಕಂಡು ಬಂದಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.

ಪ್ರಧಾನ ಕಚೇರಿಯ (ಡಿಜಿಪಿ) ಆದೇಶಗಳಲ್ಲಿ ನೀಡಿರುವ ಸೂಚನೆಗಳನ್ನು ಉಲ್ಲಂಘಿಸುವ ಮೂಲಕ ಕರ್ತವ್ಯದಲ್ಲಿ ಅತೀವ ಬೇಜವಾಬ್ದಾರಿ, ಉದ್ದಟ್ಟತನ ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ತೋರಿ ವರ್ಗಾವಣೆಗೊಂಡ ಸ್ಥಳದಲ್ಲಿ ವರದಿ ಮಾಡದಿರುವ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ಮತ್ತು ಡಿವೈಎಸ್ಪಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆ ಅಧಿಕಾರಿಗಳು ಹಿಂದಿನ ಘಟಕಗಳಲ್ಲಿ ಬಿಡುಗಡೆಗೊಂಡಿರುವ ಬಗ್ಗೆ ದಾಖಲೆಗಳೊಂದಿಗೆ ದೃಢಪಡಿಸಿಕೊಂಡು ವರ್ಗಾವಣೆಗೊಂಡ ಸ್ಥಳದಲ್ಲಿ ವರದಿ ಮಾಡದಿರುವ ಅಧಿಕಾರಿಗಳ ವಿರುದ್ಧ ವಿಶೇಷ ವರದಿಯನ್ನು ಕಚೇರಿ ಕಳುಹಿಸಬೇಕು ಎಂದು ಎಡಿಜಿಪಿ ಸೌಮೆಂದು ಮುಖರ್ಜಿ ಸೂಚಿಸಿದ್ದಾರೆ.