ಗಂಗೊಳ್ಳಿ: ನಾಡಿಗೆ ಸಮರ್ಪಣಾ ಭಾವದಿಂದ ತನ್ನನ್ನು ಅರ್ಪಿಸಿಕೊಂಡು ಮಾದರಿಯಾದ ಗಿಳಿಯಾರು ಕುಶಲ ಹೆಗ್ಡೆಯವರ ಸ್ಮರಣೆಯಲ್ಲಿ ದತ್ತಿ ನಿಧಿ ಮೂಲಕ ವಿದ್ಯಾರ್ಥಿಗಳಿಗೆ, ಅಸಹಾಯಕರಿಗೆ 23 ವರ್ಷಗಳಿಂದ ಮಾಡುವ ಸಹಾಯ ಒಂದು ಪವಿತ್ರ ಯಜ್ಞ ಎಂದು ಕರೆಯಬಹುದು ಎಂದು ಸಾಹಿತಿ ಪ್ರೊ.ಎ.ವಿ.ನಾವಡ ಹೇಳಿದರು.
ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಮಾರಂಭ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಕಾನೂನು ಸಲಹೆಗಾರ ಸಿಎ ನಾಗರಾಜ ಆಚಾರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿ ನಿಧಿ ಅಧ್ಯಕ್ಷ ಬಿ.ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಯು.ಎಸ್.ಶೆಣೈ ಸ್ವಾಗತಿಸಿದರು. ವಿಶ್ವಸ್ಥ ಉದಯ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು. ವಿಶ್ವಸ್ಥರಾದ ಕೆ.ನಾರಾಯಣ, ಜಿ.ಸಂತೋಷ ಕುಮಾರ್ ಶೆಟ್ಟಿ, ಖಜಾಂಚಿ ಸ್ನೇಹಪ್ರಭಾ ರೈ ಸಾಧಕ ವಿದ್ಯಾರ್ಥಿಗಳ ವಿವರ ನೀಡಿದರು. ಹಂದಕುಂದ ಸೋಮಶೇಖರ ಶೆಟ್ಟಿ ರ‌್ಯಾಂಕ್ ವಿಜೇತರನ್ನು ಪರಿಚಯಿಸಿದರು. ಪಿ. ಜಯವಂತ ಪೈ ವಂದಿಸಿದರು.
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ರಾಜ್ಯಮಟ್ಟದಲ್ಲಿ ರ‌್ಯಾಂಕ್ ಪಡೆದ 60 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿಗೆ ಸೇರ್ಪಡೆಗೊಂಡ ಅರ್ಹ 400 ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.