ನ್ಯೂಸ್

ಕೈಗೆ ಸಿಗದ ಪಕ್ಷದ ವರಿಷ್ಠರು, ರಾಜ್ಯ ನಾಯಕರಿಗೆ ನಿರಾಸೆ

ದೂರು-ದುಮ್ಮಾನ ಹೇಳಿಕೊಳ್ಳಲು ಸಿಗದ ಅವಕಾಶ | ಬೆಳಗಾವಿಗೆ ಆಗಮಿಸಿದ್ದ ಮೂರು ಪವರ್ ಸೆಂಟರ್

ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಎಐಸಿಸಿ ಕಾರ್ಯಕಾರಿಣಿಗೆ ಆಗಮಿಸಿದ್ದ ಕಾಂಗ್ರೆಸ್​ನ ಮೂರು ಪವರ್ ಸೆಂಟರ್ ಜತೆ ಮುಕ್ತ ಮಾತುಕತೆಗೆ ಬಯಸಿದ್ದ ಪಕ್ಷದ ರಾಜ್ಯ ನಾಯಕರಿಗೆ ನಿರಾಸೆ ಕಾಮೋಡ ಕವಿದಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬೆಳಗಾವಿಗೆ ಆಗಮಿಸಿದಾಗ ಅನೌಪಚಾರಿಕ ಮಾತುಕತೆಗೆ ಸಮಯ ಒದಗಿ ಬರುತ್ತದೆ, ಅಲ್ಲಿ ತಮ್ಮ ಅಭಿಪ್ರಾಯ ಹೇಳಿಕೊಳ್ಳಬೇಕೆಂದು ಸಚಿವರು, ಶಾಸಕರು ತಯಾರಾಗಿದ್ದರು. ಕೆಲವರು ತಮ್ಮ ಸಾಧನೆಯ ವರದಿಯನ್ನೂ ಸಿದ್ಧಪಡಿಸಿಕೊಂಡಿದ್ದರು. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಕಾರಣ ರಾತ್ರಿಯೇ ಆ ಮೂವರು ನಾಯಕರು ನಿರ್ಗಮಿಸಿದ್ದು, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ.

ಪೂರ್ವನಿಗದಿತ ಕಾರ್ಯಕ್ರಮದ ಪ್ರಕಾರ ಡಿ.26ರ ರಾತ್ರಿ ಎಐಸಿಸಿ ಅಧ್ಯಕ್ಷರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಮತ್ತು 27ರಂದು ಬೆಳಗ್ಗೆ ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್ ಜತೆ ಮುಕ್ತ ಮಾತುಕತೆಗೆ ಅವಕಾಶ ಸಿಗುತ್ತದೆ ಎಂದು ಸಚಿವ, ಶಾಸಕರು ಆಸೆ ಇಟ್ಟುಕೊಂಡಿದ್ದರು. ಸಚಿವರಾಗಲು ಬಯಸಿದ ಎಂಟಕ್ಕೂ ಹೆಚ್ಚು ಶಾಸಕರು 3-4 ನಾಲ್ಕು ಮಂದಿ ಒಟ್ಟಾಗಿ ರಾಹುಲ್ ಗಾಂಧಿಯವರಲ್ಲಿ ಅರಿಕೆ ಮಾಡಿಕೊಳ್ಳಲು ಉದ್ದೇಶಿಸಿದ್ದರು. ಅದೇ ರೀತಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ನೀಡಿದ್ದ ಭರವಸೆಯನ್ನು ಕೆ.ಸಿ.ವೇಣುಗೋಪಾಲ್ ಅವರಿಗೆ ನೆನಪಿಸಲು ಬಯಸಿದ್ದರು.

ಹಾಗೆಯೇ ಶಾಸಕರ ಗುಂಪೊಂದು ಸಚಿವರ ಮೇಲೆ ದೂರು ಕೊಡಲೂ ತಯಾರಾಗಿದ್ದರು. ಕೆಲವು ಸಚಿವರು ತಮಗೂ ಪಕ್ಷಕ್ಕೂ ಸಂಬಂಧ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಅವರ ದೂರಿನ ಸಾರವಾಗಿತ್ತು. ಹಾಗೆಯೇ, ಉದಯ ಪುರ ನಿರ್ಣಯದಂತೆ ಒಬ್ಬರಿಗೆ ಒಂದೇ ಹುದ್ದೆ ಪಾಲನೆಯಾಗಲಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಇದು ಸಕಾಲ ಎಂದು ರಾಹುಲ್ ಹಾಗೂ ವೇಣುಗೋಪಾಲ್​ಗೆ ನೆನಪಿಸಲು ಹಿರಿಯ ಸಚಿವರು ಸಿದ್ಧತೆ ನಡೆಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪರಿಷತ್​ನ ನಾಲ್ಕು ಸ್ಥಾನಕ್ಕೆ ಆಯ್ಕೆ: ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳ ಭರ್ತಿಗೆ ಆಯ್ಕೆ ಮಾಡಲು ಆಡಳಿತ ಪಕ್ಷದಲ್ಲಿ ಪ್ರಕ್ರಿಯೆ ಇನ್ನಷ್ಟೇ ಚಾಲನೆಗೊಳ್ಳಬೇಕಿದೆ. ಕೆಪಿಸಿಸಿ ಮಾಹಿತಿ ಪ್ರಕಾರ ಜನವರಿ ಎರಡನೇ ವಾರದಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಜತೆ ಚರ್ಚೆ ನಡೆಸುವರು. ಹೈಕಮಾಂಡ್ ಆಹ್ವಾನಿಸಿದರೆ ತಕ್ಷಣವೇ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಐದು ‘ಸಿ’ ಚರ್ಚೆ: ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಕಾಸ್ಟ್, ಕ್ಯಾಶ್, ಕ್ಯಾಂಡಿಡೇಟ್ ಸರಿಯಾಗಿದ್ದರೆ ಚುನಾವಣೆ ಗೆಲ್ಲಬಹುದು ಎಂದು ರಾಜ್ಯ ನಾಯಕರು ಹೈಕಮಾಂಡ್ ಗಮನಕ್ಕೆ ತಂದಿದ್ದು, ಈ ವೇಳೆ ಈ ಮೂರು ಸಿ ಇದ್ದರೆ ಸಾಲದು, ಕಾಂಗ್ರೆಸ್ ಮತ್ತು ಕಾನ್​ಸ್ಟಿಟ್ಯೂಷನ್ ಕೂಡ ಜತೆಗಿಟ್ಟುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದರು ಎನ್ನಲಾಗಿದೆ.

ಹೋರಾಟದ ನೀಲಿನಕ್ಷೆ

ಸಂವಿಧಾನ ವಿಚಾರವಾಗಿ ವರ್ಷಪೂರ್ತಿ ರಿಲೇ ಮಾದರಿಯಲ್ಲಿ ಪಾದಯಾತ್ರೆ, ಸಭೆಗಳನ್ನು ನಡೆಸಲು ಎಐಸಿಸಿ ನಿರ್ಣಯಿಸಿದೆ. ಅದನ್ನು ಕರ್ನಾಟಕದಲ್ಲಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಇಷ್ಟರಲ್ಲೇ ಬೆಂಗಳೂರಿಗೆ ಆಗಮಿಸುವರು. ಕಾರ್ಯಕ್ರಮ ಎಲ್ಲಿ ಆರಂಭಿಸಬೇಕು, ಯಾವ ಸ್ವರೂಪದಲ್ಲಿ ನಡೆಸಬೇಕು, ಯಾತ್ರೆ ಸಾಗುವ ಮಾರ್ಗದ ಕುರಿತು ನೀಲಿನಕ್ಷೆ ಸಿದ್ಧಪಡಿಸಬೇಕಿದ್ದು, ಈ ಸಂಬಂಧ ಸಮಿತಿ ರಚಿಸುವ ಸಾಧ್ಯತೆ ಇದೆ. ಜತೆಗೆ ಕೆಪಿಸಿಸಿ ನಿಷ್ಕ್ರಿಯ ಪದಾಧಿಕಾರಿಗಳನ್ನು ಕೈಬಿಟ್ಟು, ಸಕ್ರಿಯವಾಗಿರುವವರಿಗೆ ಅವಕಾಶ ನೀಡುವುದು, ಸಂಪುಟ ಪುನಾರಚನೆ ಕುರಿತು ಸುರ್ಜೆವಾಲಾ ಭೇಟಿ ಸಂದರ್ಭದಲ್ಲಿ ಪ್ರಾಥಮಿಕ ಹಂತದ ಚರ್ಚೆ ನಡೆಸುವ ಸಾಧ್ಯತೆ ಇದೆ.