ನ್ಯೂಸ್

ಕೈಸೇರದ ಮಾಸಾಶನ; ಅಂಗವಿಕಲರ ಮೂಕರೋದನ

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ರಾಜ್ಯ ಸರ್ಕಾರ ಅಂಗವಿಕಲರ ಖಾತೆಗೆ ನೇರ ಹಣ ಜಮಾ ಆಗುವಂತೆ ಕ್ರಮಕೈಗೊಂಡಿದೆ. ಆದರೆ ಕಂದಾಯ ಇಲಾಖೆ ನಿರ್ಲಕ್ಷ್ಯ್ಕೆ ರಾಜ್ಯಾದ್ಯಂತ ಅಂಗವಿಕಲರು ಪಿಂಚಣಿಗಾಗಿ ಪರದಾಡುವಂತಾಗಿದೆ. ಕೆಲ ಅಂಗವಿಕಲರು ವಿಜಯವಾಣಿಗೆ ಕರೆ ಮಾಡಿ ಅಳಲು ತೋಡಿ ಕೊಂಡಿದ್ದು, ನವೀನ್ ಬಿಲ್ಗುಣಿ ಸಿದ್ಧಪಡಿಸಿದ ವರದಿ ಇಲ್ಲಿದೆ.

ಶಿವಮೊಗ್ಗ: ಅಂಗವಿಕಲರ ಮಾಸಾಶನ ಹೆಚ್ಚಳದ ವೇಳೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನೇರವಾಗಿ ಆಯಾ ತಹಸೀಲ್ದಾರ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದ ರಾಜ್ಯ ಸರ್ಕಾರ, ಇದೀಗ 4-5 ತಿಂಗಳಿಂದ ಲಕ್ಷಾಂತರ ಫಲಾನುಭವಿಗಳಿಗೆ ಮಾಸಾಶನವನ್ನೇ ತಡೆಹಿಡಿದಿದೆ. ಇದನ್ನೇ ನಂಬಿ ಬದುಕುತ್ತಿದ್ದ ಅಂಗವಿಕಲರು ಇದೀಗ ನಿತ್ಯ ಪರದಾಡುವಂತಾಗಿದೆ.

ರಾಜ್ಯದಲ್ಲಿ ಅಂಧತ್ವ, ಮಂದದೃಷ್ಟಿ, ಕುಷ್ಠರೋಗ ನಿವಾರಿತರು, ಶ್ರವಣದೋಷವುಳ್ಳವರು, ಚಲನವಲನ ಅಂಗವಿಕಲತೆ, ಬುದ್ಧಿಮಾಂದ್ಯತೆೆ ಹಾಗೂ ಮಾನಸಿಕ ಅಸ್ವಸ್ಥರನ್ನು ಒಳಗೊಂಡು 68.06 ಲಕ್ಷಕ್ಕೂ ಅಧಿಕ ಅಂಗವಿಕಲರು ಮಾಸಾಶನಕ್ಕೆ ಅರ್ಹರಿದ್ದಾರೆ. ಆದರೆ ರಾಜ್ಯಾದ್ಯಂತ 2019ರ ಸೆಪ್ಟಂಬರ್​ನಿಂದ ಇಲ್ಲಿವರೆಗೂ ಮಾಸಾಶನ ಸ್ಥಗಿತಗೊಳಿಸಿರುವುದು ಫಲಾನುಭವಿಗಳನ್ನು ಚಿಂತೆಗೆ ದೂಡಿದೆ.

ಈ ಮೊದಲು ಶೇ.40 ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆಯುಳ್ಳ ವ್ಯಕ್ತಿಗಳು 500 ರೂ. ಹಾಗೂ ಶೇ.75 ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆಯುಳ್ಳ ವ್ಯಕ್ತಿಗಳು (ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೆ) 1,200 ರೂ. ಮಾಸಾಶನ ಪಡೆಯಲು ಅರ್ಹರಾಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಸಿಎಂ ಆದ ಬಳಿಕ ಕ್ರಮವಾಗಿ ಇದನ್ನು 600 ರೂ.ದಿಂದ 2,500 ರೂ.ವರೆಗೆ ಏರಿಕೆ ಮಾಡಿದ್ದರು. ಇದೀಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲ್ಲಸಲ್ಲದ ನೆಪ ಹೇಳಿಕೊಂಡು ಮಾಸಾಶನ ಸ್ಥಗಿತಗೊಳಿಸಿ ಅಂಗವಿಕಲರನ್ನು ಬೀದಿಗೆ ತಳ್ಳಿದೆ.

ಉದ್ಧಟತನಕ್ಕೆ ಅಸಮಾಧಾನ: ಮಾಸಾಶನ ಬಾರದಿರುವ ಬಗ್ಗೆ ಫಲಾನುಭವಿಗಳು ತಹಸೀಲ್ದಾರ್ ಕಚೇರಿಗೆ ಪ್ರತಿನಿತ್ಯ ಅಲೆಯುವಂತಾಗಿದೆ. ವಿಳಂಬದ ಬಗ್ಗೆ ವಿಚಾರಿಸಲು ತಾಲೂಕು ಕಚೇರಿಗೆ ತೆರಳಿದರೆ ಅಲ್ಲಿನ ಸಿಬ್ಬಂದಿ ಉದ್ಧಟತನದ ಮಾತನಾಡುತ್ತಾರೆ. ಯಾರಿಗೆ ನಮ್ಮ ಸಮಸ್ಯೆ ಹೇಳಿಕೊಳ್ಳಬೇಕೋ ತಿಳಿಯುತ್ತಿಲ್ಲ ಎನ್ನುತ್ತಾರೆ ಅಂಗವಿಕಲರು.

ಸೆಪ್ಟೆಂಬರ್​ನಿಂದ ಮಾಸಾಶನ ತಡೆಹಿಡಿಯಲಾಗಿದೆ. ತಾಲೂಕು ಕಚೇರಿಗೆ ಅಲೆದಾಡಿ ಸಾಕಾಗಿದೆ. ಡಿಸೆಂಬರ್ ಮಾಸಾಶನ ಹಾಕಿದ್ದಾರೆ. ಇನ್ನುಳಿದಂತೆ ನಾಲ್ಕು ತಿಂಗಳ ಹಣ ಹಾಕಿಲ್ಲ. ಅದನ್ನೇ ನಂಬಿ ಬದುಕುತ್ತಿರುವ ನನ್ನಂತಹ ಸಾವಿರಾರು ಅಂಗವಿಕಲರು ಪರದಾಡುವಂತಾಗಿದೆ. | ಕುಮಾರೇಗೌಡ ಚಿಕ್ಕಮಗಳೂರು ಅಂಗವಿಕಲರ ಬ್ಯಾಂಕ್ ಖಾತೆ ಸಂಖ್ಯೆ ತಪ್ಪಾಗಿದ್ದರೆ ಅಥವಾ ಆಧಾರ್ ಲಿಂಕ್ ಆಗಿರದಿದ್ದರೆ ಮಾಸಾಶನ ಬರುತ್ತಿಲ್ಲ. ಆರ್​ಬಿಐನಿಂದ ತೊಡಕಾಗಿದ್ದರಿಂದ ನವೆಂಬರ್ ಮತ್ತು ಡಿಸೆಂಬರ್​ನಲ್ಲಿ ಮಾಸಾಶನ ವಿಳಂಬವಾಗಿತ್ತು. ಆ ಎರಡು ತಿಂಗಳ ಮಾಸಾಶನ ಜ.15ಕ್ಕೆ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿದೆ. ವೈಯಕ್ತಿಕ ಸಮಸ್ಯೆಗಳಿಂದ ಕೆಲವರ ಮಾಸಾಶನ ವಿಳಂಬವಾಗುತ್ತಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಯಾ ಟ್ರಜರಿಗಳಲ್ಲಿ ನೀಡಿದರೆ ಸಮಸ್ಯೆ ಬಗೆಹರಿಯಲಿದೆ. | ಎಸ್.ಸವಿತಾ ಕಂದಾಯ ಇಲಾಖೆ, ಜಂಟಿ ನಿರ್ದೇಶಕಿ, ಬೆಂಗಳೂರು
ಆಧಾರ್ ತೊಡಕು?

ಬಹಳಷ್ಟು ಮಂದಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವಾಗ ಆಗಿರುವ ಎಡವಟ್ಟಿನಿಂದಲೂ ಮಾಸಾಶನ ವಿಳಂಬವಾಗುತ್ತಿದೆ. ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಖಾತೆಗೆ ಫಲಾನುಭವಿ ಗಳ ಖಾತೆಗೆ ಹಣ ಜಮಾ ಆಗುತ್ತಿಲ್ಲ. ಇನ್ನೂ ಕೆಲವರು ಮಾಸಾಶನಕ್ಕೆ ಬ್ಯಾಂಕ್ ಖಾತೆ ನಂಬರ್​ಗಳನ್ನು ತಪ್ಪಾಗಿ ನಮೂದಿಸಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆಗಳಿಂದ ವಿಳಂಬ ಆಗುತ್ತಿದೆಯೇ ವಿನಾ ಸಾಮೂಹಿಕವಾಗಿ ಸ್ಥಗಿತಗೊಂಡಿಲ್ಲ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.