- ಹಳೆ ಚಿತ್ರದ ಟೈಟಲ್ ನಲ್ಲಿ ಹೊಸ ಸಿನಿಮಾ ಘೋಷಣೆ
- ಅಮೆರಿಕಾ ಅಮೆರಿಕಾ 2 ಸಿನಿಮಾ ಘೋಷಿಸಿದ ನಟ
- ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್, ಶಾನ್ವಿ ಶ್ರೀವಾಸ್ತವ್ ಮುಖ್ಯಭೂಮಿಕೆಯಲ್ಲಿ ನಟನೆ
ಬೆಂಗಳೂರು: ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ, ರಮೇಶ್ ಅರವಿಂದ್, ಹೇಮಾ, ಅಕ್ಷಯ್ ಆನಂದ್ ಮುಖ್ಯಭೂಮಿಕೆಯಲ್ಲಿದ್ದ ಸಿನಿಮಾ ‘ಅಮೆರಿಕಾ ಅಮೆರಿಕಾ’. 1997ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರವು 90ರ ದಶಕದಲ್ಲಿ ಭರ್ಜರಿ ಯಶಸ್ಸು ಕಂಡ ಸಿನಿಮಾಗಳಲ್ಲೊಂದು. ಇಂದಿಗೂ ಈ ಚಿತ್ರದ ಹಾಡುಗಳು ಜನಜನಿತ. ಹೀಗಿರುವಾಗಲೇ 29 ವರ್ಷಗಳ ಬಳಿಕ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ‘ಅಮೆರಿಕಾ ಅಮೆರಿಕಾ 2’ ಚಿತ್ರ ಘೋಷಿಸಿದ್ದಾರೆ. ಟೈಟಲ್ ಹಳೆಯದಾದರೂ, ಕಥೆ ಹೊಸದು ಎಂದು ಹೇಳಿಕೊಂಡಿದ್ದಾರೆ. ಈ ಸೀಕ್ವೆಲ್‌ನಲ್ಲಿ ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್, ಶಾನ್ವಿ ಶ್ರೀವಾಸ್ತವ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ನಿರೂಪ್ ಭಂಡಾರಿ, ‘ನಾಗತಿಹಳ್ಳಿ ಚಂದ್ರಶೇಖರ್ ಅವರು ಕರೆದು ಈ ಚಿತ್ರದ ಕಥೆ ಹೇಳಿದಾಗ, ಶೀರ್ಷಿಕೆ ಕೇಳಿಯೇ ನಟಿಸಬೇಕೆಂದುಕೊಂಡೆ. 29 ವರ್ಷಗಳ ಹಿಂದೆ ಥಿಯೇಟರ್‌ನಲ್ಲಿ ಆ ಚಿತ್ರವನ್ನು ನೋಡಿದ ನೆನಪು ಇನ್ನು ಹಾಗೆ ಉಳಿದಿದೆ. ಇದು ಅದರ ಮುಂದುವರಿದ ಭಾಗವಲ್ಲವಾದರೂ, ಕಥೆ ಹಾಗೂ ಪಾತ್ರಗಳು ಎಲ್ಲರ ನೆನಪಿನಲ್ಲಿರುವಂತದ್ದು. ನನ್ನ ಪಾತ್ರ ಕೂಡ ಚೆನ್ನಾಗಿದೆ’ ಎಂದು ಹೇಳಿಕೊಂಡರು. ಮನೋಮೂರ್ತಿ ಸಂಗೀತ, ನಕುಲ್ ಅಭಯಂಕರ್ ಹಿನ್ನೆಲೆ ಸಂಗೀತ, ಎಸ್.ಕೆ.ರಾವ್ ಛಾಯಾಗ್ರಹಣ ಚಿತ್ರಕ್ಕಿದೆ.
ಮುಂದುವರಿದ ಭಾಗವಲ್ಲ
ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಹಳೆಯ ಕಥೆಗಳಿಂದಲೇ ಹೊಸ ಕಥೆಗಳು ಹುಟ್ಟುವುದು. 90ರ ದಶಕದಲ್ಲಿ ಅದ್ಭುತ ಯಶಸ್ಸು ಕಂಡ ‘ಅಮೆರಿಕಾ ಅಮೆರಿಕಾ’ ಶೀರ್ಷಿಕೆಯೊಂದಿಗೆ ಹೊಸ ಚಿತ್ರ ನಿರ್ದೇಶಿಸಿದ್ದೇನೆ. ಆದರೆ, ಈ ಚಿತ್ರ ಅದರ ಮುಂದುವರಿದ ಭಾಗವಲ್ಲ. ಲೇಖಕಿ ಸಹನಾ ವಿಜಯ್‌ಕುಮಾರ್ ರಚನೆಯ ಕಾದಂಬರಿ ಆಧಾರಿತವಾಗಿದ್ದು, ಸ್ತ್ರೀ ಪ್ರಧಾನ ಚಿತ್ರ ಎನ್ನಬಹುದು. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದ್ದೇವೆ. ಸದ್ಯ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ಆರಂಭಗೊಂಡಿವೆ’ ಎಂದು ಹೇಳಿದರು.