ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯ, ಛತ್ರಗಳ ಜಮೀನು ಹಾಗೂ ಇತರೆ ಆಸ್ತಿಗಳ ಬಾಬ್ತು ದಾಖಲೆಗಳನ್ನು ನವೀಕರಿಸಿ, ನಿರ್ವಹಿಸಲು ಸರ್ಕಾರ ಸೂಚಿಸಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದನ್ವಯ ದೇವಾಲಯ ಮತ್ತು ಅದರ ಸ್ಥಿರ ಆಸ್ತಿಯ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದಲ್ಲಿ ದಾಖಲಿಸಿಕೊಂಡು, ಪ್ರಕಟಣೆ ಹೊರಡಿಸಬೇಕಾಗಿರುತ್ತದೆ.
ಆದರೆ, ಮುಜರಾಯಿ ಇಲಾಖೆ, ಕಂದಾಯ/ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ದಾಖಲೆಗಳು ಇಲ್ಲ. ಅಲ್ಲದೆ, ಹಲವು ’ಸಿ’ ದರ್ಜೆ ದೇವಾಲಯಗಳ ಮಾಹಿತಿಯೇ ಇಲ್ಲದಿರುವುದು ತಸ್ತೀಕ್ ವಿತರಿಸುವ ಸಂದರ್ಭದಲ್ಲಿ ಕಂಡು ಬಂದಿದೆ. ಆದ್ದರಿಂದ, ಇಲಾಖೆಯ ಆಸ್ತಿಯ ಸೂಕ್ತ ದಾಖಲೀಕರಣ ಹಾಗೂ ಗಡಿ ಗುರುತಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ಒತ್ತುವರಿಯಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಆಯಾ ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಜಮೀನು/ಆಸ್ತಿಗಳ ದಾಖಲೆ ನಿರ್ವಹಣೆ ಜವಾಬ್ದಾರಿ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿಗಳದ್ದೇ ಆಗಿದೆ. ಕಾರ್ಯನಿರ್ವಾಹಣಾಧಿಕಾರಿ ಇಲ್ಲದೇ ಇರುವ ದೇವಾಲಯಗಳ ಜಮೀನಿನ
ಆಸ್ತಿಯ ದಾಖಲೆಗಳನ್ನು ಸಿರ್ವಹಿಸುವ ಜವಾಬ್ದಾರಿ ಸಂಬಂಧಿಸಿದ ತಹಶೀಲ್ದಾರರದ್ದು ಎಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ. ದೇವಾಲಯಗಳ ಆಸ್ತಿಯ ದಾಖಲೆ ತಯಾರಿಸಿದ ನಂತರ ಅವುಗಳನ್ನು ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರಿಗೆ ಅಧಿಸೂಚನೆ ಹೊರಡಿಸಲು ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಕಳುಹಿಸಿಕೊಡುವಂತೆಯೂ ಸೂಚಿಸಲಾಗಿದೆ.